ಚಿತ್ತೂರು,ಜು.24- ಡ್ರಗ್ ಪೆಡ್ಲರ್‍ಗಳ ಜಾಡು ಹಿಡಿದು ಕಾರ್ಯಾಚರಣೆಗಿಳಿದಿದ್ದ ಪೊಲೀಸರ ವಾಹನ ಆಂಧ್ರಪ್ರದೇಶದ ಚಿತ್ತೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿ ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಬೆಂಗಳೂರಿನ ಶಿವಾಜಿನಗರದ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಅವಿನಾಶ್(29), ಕಾನ್‍ಸ್ಟೆಬಲ್ ಅನಿಲ್ ಮುಲ್ಲಿಕ್(26) ಹಾಗೂ ಖಾಸಗಿ ಕಾರಿನ ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್‍ಐ ದೀಕ್ಷಿತ್, ಕಾನ್‍ಸ್ಟೆಬಲ್ ಶರಣಬಸವ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಘಟನೆ ವಿವರ:
ಎರಡು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸುವ ಸಲುವಾಗಿ ಪೊಲೀಸರು ತೆರಳುತ್ತಿದ್ದರು. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಇನ್ನೋವಾ ಕಾರಿನ ಚಾಲಕ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಸ್ಥಳದಲ್ಲೇ ಚಾಲಕ ಮೃತಪಟ್ಟರೆ , ಪೊಲೀಸರು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾರೆ.
ಮುಂದೆ ಹೋಗುತ್ತಿದ್ದ ಪೊಲೀಸರಿದ್ದ ಮತ್ತೊಂದು ವಾಹನ ಅಪಘಾತಗೊಳಗಾಗಿ ಗಾಯಗೊಂಡ ಸಿಬ್ಬಂದಿ ಮಾಹಿತಿ ಆಧರಿಸಿ ತಕ್ಷಣ ವಾಪಸ್ ಬರಲು ಯತ್ನಿಸಿದೆ. ಆ ವೇಳೆ ಸದರಿ ಕಾರಿನ ಬ್ರೇಕ್ ಕೂಡ ಫೇಲ್ಯೂರ್ ಆಗಿ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಈ ಕಾರಿನಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಕೊನೆಗೂ ಸುರಕ್ಷಿತವಾಗಿ ಘಟನಾ ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಖಾಸಗಿ ವಾಹನ ಅಪಘಾತವಾಗಿದ್ದರಿಂದ ಸ್ಥಳೀಯರಿಗೆ ತಕ್ಷಣವೇ ಗಾಯಗೊಂಡವರು ಪೊಲೀಸರು ಎಂಬ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಆದರೂ ಸ್ಥಳೀಯ ಪೊಲೀಸರಿಗೆ ಹಾಗೂ ಅ್ಯಂಬುಲೆನ್ಸ್‍ಗೆ ಮಾಹಿತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಮೃತ ಎಸ್‍ಐ ಅವಿನಾಶ್ ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕಿನ ಅರಕೂಡು ಗ್ರಾಮದವರಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪೊಲೀಸ್ ಸೇವೆಗೆ ಸೇರಿದ್ದರು.
ಕಾನ್‍ಸ್ಟೆಬಲ್ ಅನಿಲ್ ಮುಲ್ಲಿಕ್ ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಚಿಕ್ಕಳಕೆರೆ ಗ್ರಾಮದವರಾಗಿದ್ದಾರೆ. ಮೃತ ಜೋಸೆಫ್ ಕಾರು ಚಾಲಕನಾಗಿದ್ದು, ಬೆಂಗಳೂರಿನ ಶಿವಾಜಿನಗರದ ನಿವಾಸಿ ಎನ್ನಲಾಗಿದೆ. ಗಾಯಾಳುಗಳನ್ನು ನೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಆಂಧ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಗಾಯಾಳುಗಳ ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.