ಕೋಲ್ಕತ್ತಾ, ಜು.18- ಕಚ್ಚಾಬಾಂಬ್ ತಯಾರಿಸಿ ಪ್ರಯೋಗ ಮಾಡುವ ವೇಳೆ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟು ಒಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಗೋಪಾಲಪುರದ ಮಾಲ್ಡಾಸ್ ಮಿನಿಚೌಕ್‍ನಲ್ಲಿ ನಿನ್ನೆ ಮಧ್ಯರಾತ್ರಿ 2.30ರ ಸುಮಾರಿನಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಟ್ಟು ಮೂವರು ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿದೆ.
ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳುವನ್ನು ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿದಾಗ ಒಟ್ಟು ನಾಲ್ಕು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಜತೆಗೆ ಭಾರೀ ಪ್ರಮಾಣದ ಸ್ಫೋಟಕಗಳು ಕಂಡುಬಂದಿವೆ.
ಬಾಂಬ್ ನಿರೋಧಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸೋಟಕವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಉದ್ರಿಕ್ತ ವಾತಾವರಣ ಈಗಲೂ ಹೊಗೆಯಾಡುತ್ತಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸದರಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರನ್ನು ಫರ್ಜಾನಾ ಎಸ್.ಕೆ. (45), ಶಫೀಕುಲ್ ಇಸ್ಲಾಂ (30) ಎಂದು ಗುರುತಿಸಲಾಗಿದೆ. ಹಿಜಾಬುಲ್ ಎಸ್.ಕೆ. (25) ಗಾಯಗೊಂಡಿದ್ದಾನೆ. ಆರೋಪಿಗಳು ಯಾವ ಕಾರಣಕ್ಕಾಗಿ ಕಚ್ಚಾಬಾಂಬ್ ತಯಾರಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ನಡೆದಿದ್ದು, ಆರೋಪಿಗಳ ನಿರ್ದಿಷ್ಟ ಉದ್ದೇಶದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಜಿಲ್ಲಾ ಮುಖ್ಯಾಧಿಕಾರಿ ಪ್ರದೀಪ್‍ಕುಮಾರ್ ಯಾದವ್ ತಿಳಿಸಿದ್ದಾರೆ.