ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಬೆಂಗಳೂರು, ಮೇ 20- ಕಾಲೇಜೊಂದರ ಬಳಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಎರಡು ಲಕ್ಷ ರೂ . ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯ ಕಾಲೇಜೊಂದರ ಆಟದ ಮೈದಾನದ ಬಳಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಸಿಸಿಬಿ ಮಾದಕದ್ರವ್ಯ ನಿಗ್ರಹ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ ಸುಮಾರು 2 ಲಕ್ಷ ರೂ. ಬೆಲೆಯ ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್, 1 ಕೆಜಿ 100 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತಿತರ ವಸ್ತುಗಳನ್ನು ವಶಪಡಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳೊಂದಿಗೆ ಈ ಇಬ್ಬರು ಪೆಡ್ಲರ್‍ಗಳು ಸೇರಿಕೊಂಡು ಕೆಜಿ ಗಟ್ಟಲೆ ಗಾಂಜಾವನ್ನು ಕಡಿಮೆ ಬೆಲೆಗೆ ನಗರಕ್ಕೆ ತರಿಸಿಕೊಂಡು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ, ಪರಿಚಯಸ್ಥ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು 10 ಗ್ರಾಂಗೆ 1500ರಿಂದ 2 ಸಾವಿರದವರೆಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ.

ಎಂಡಿಎಂಎ ಕ್ರಿಸ್ಟಲ್‍ನ್ನು 1 ಗ್ರಾಂಗೆ 8 ಸಾವಿರದಿಂದ 10 ಸಾವಿರದವರೆಗೂ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿಕೊಂಡಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.