ಉಡಗಳನ್ನು ಬೇಟೆಯಾಡುತ್ತಿದ್ದ ಇಬ್ಬರ ಬಂಧನ

ಕನಕಪುರ, ಜೂ.12- ಕಾಡಿನಲ್ಲಿ ಅಕ್ರಮವಾಗಿ ಉಡಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಕಳ್ಳ ಬೇಟೆಗಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ಮುಗ್ಗೂರು ಅರಣ್ಯ ಪ್ರದೇಶದ ಬಸವನವಾಡೆಯ ಚಿಲುಮೆ ಒಟ್ಟು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಿ ಹಿಡಿದಿದ್ದ ಮೂರು ಉಡಗಳನ್ನು ಅಧಿಕಾರಿಗಳು ಜೀವಂತವಾಗಿ ವಶಪಡಿಸಿಕೊಂಡಿದ್ದಾರೆ.

ಉಯ್ಯಂಬಳ್ಳಿ ಹೋಬಳಿ ಮಡಿವಾಳ ಗ್ರಾಮದ ಮಹಾಲಿಂಗ (30), ನಾಗರಾಜು (22) ಬಂಧಿತ ಆರೋಪಿಗಳಾಗಿದ್ದು, ಅದೇ ಗ್ರಾಮದ ಶಿವಮಾದು (24) ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.  ಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಸಾಕು ನಾಯಿಯ ಸಹಾಯದಿಂದ ಉಡಗಳನ್ನು ಬೇಟೆಯಾಡಿದ್ದರು.

ಬೇಟೆಯ ನಂತರ ಉಡಗಳನ್ನು ಸಾಗಿಸುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯ ಸಂರಕ್ಷಣಾ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದ್ದಾರೆ. ಅನುಮಾನಾಸ್ಪದದಿಂದ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಬೇಟೆಯಾಡಿದ್ದ ಜೀವಂತ ಉಡಗಳನ್ನು ಪುನಃ ಕಾಡಿಗೆ ಬಿಡಲಾಗಿದೆ ಎಂದ ವಲಯ ಅರಣ್ಯಾಧಿಕಾರಿ ವಿಜಯ್‍ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜೇಶ್, ಸಿಬ್ಬಂದಿಗಳಾದ ಮುತ್ತುನಾಯಕ್, ಶ್ರೀಕಾಂತ್ ಪಾಲ್ಗೊಂಡಿದ್ದರು.