ಇಬ್ಬರು ಕುಖ್ಯಾತ ಸರಗಳ್ಳರ ಬಂಧನ

Social Share

ಬೆಂಗಳೂರು,ಆ.26- ಹೆಲ್ಮೆಟ್ ಧರಿಸಿ ವಿವಿಧ ಬೈಕ್‍ಗಳು ಮತ್ತು ಟಾಟಾಏಸ್ ವಾಹನಗಳನ್ನು ಕೃತ್ಯಕ್ಕೆ ಬಳಸಿಕೊಂಡು ನಕಲಿ ನಂಬರ್ ಪ್ಲೇಟ್‍ಗಳನ್ನು ಬಳಸಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ 51 ಪ್ರಕರಣಗಳನ್ನು ಪತ್ತೆಹಚ್ಚಿ 1.5 ಕೋಟಿ ರೂ. ಮೌಲ್ಯದ ಚಿನ್ನದ ಸರಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳು ನಾಡು ಮೂಲದ ಸಂತೋಷ್(35) ಮತ್ತು ಬೆಂಗಳೂರಿನ ರವಿ(35) ಬಂಧಿತ ಸರಗಳ್ಳರು. ಸಂತೋಷ್ ಬಿಕಾಂ ಪದವೀಧರನಾಗಿದ್ದು, ಇಂಟೀರಿಯಲ್ ಡೆಕೊರೇಟರ್ ವೃತ್ತಿ ಮಾಡಿಕೊಂಡು ನಗರದಲ್ಲಿ ವಾಸಿಸುತ್ತಿದ್ದನು.
ಶೋಕಿಗಾಗಿ ಹಣ ಹೊಂದಿಸಲು ಹಾಗೂ ಕ್ಯಾಸಿನೊಗೆ ಹೋಗಿ ಜೂಜಾಡಲು ಹಣಕ್ಕಾಗಿ ಸರಗಳ್ಳತನ ಮಾಡುತ್ತಿದ್ದುದ್ದು ತನಿಖೆಯಿಂದ ಗೊತ್ತಾಗಿದೆ.

ಈತ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟರೆ ರಾತ್ರಿಯೇ ಮನೆ ಸೇರಿಕೊಳ್ಳುತ್ತಿದ್ದನು. ಆರೋಪಿಗಳಿಂದ 2.5 ಕೆಜಿ ತೂಕದ 51 ವಿವಿಧ ಚಿನ್ನದ ಸರಗಳು, ಎರಡು ಫಲ್ಸರ್ ಬೈಕ್, ಟಾಟಾಏಸ್ ವಾಹನ ಮತ್ತು ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜುಲೈ 4ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಮಹಿಳೆಯೊಬ್ಬರು ತಮ್ಮ ಸಹೋದರನೊಂದಿಗೆ ಅರಕೆರೆ ಮೈಕೋಲೇಔಟ್‍ನಲ್ಲಿ ಹಾಲನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಸರಗಳ್ಳ ಸಮಯ ಸಾಧಿಸಿ ಅವರ ಕುತ್ತಿಗೆಗೆ ಕೈ ಹಾಕಿ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.

ಆ ಸಂದರ್ಭದಲ್ಲಿ ಮಹಿಳೆಯ ಕುತ್ತಿಗೆಗೆ ತರಚಿದ ಗಾಯವಾಗಿತ್ತು. ಈ ಬಗ್ಗೆ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗಾಗ್ಗೆ ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಈ ತಂಡಗಳು ಸರಗಳ್ಳ ಕೃತ್ಯವೆಸಗಿದ ಸ್ಥಳದಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಿದ್ದವು. ಅಲ್ಲದೆ ತಾಂತ್ರಿಕ ತಂಡಗಳು ಕಾರ್ಯಾಚರಣೆಯಲ್ಲಿ ಸುಳಿವನ್ನು ಬೆನ್ನಟ್ಟಿ ಹಗಲು-ರಾತ್ರಿ ಎನ್ನದೆ ಸತತ ನಾಲ್ಕೈದು ವಾರಗಳ ಕಾಲ ಕಾರ್ಯಾಚರಣೆ ನಡೆಸಿ ಪುಟ್ಟೇನಹಳ್ಳಿಯ ಕೊತ್ತನೂರುದಿಣ್ಣೆ, ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಈ ತಂಡಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿವೆ.

ಈ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬ್ಯಾಡರಹಳ್ಳಿ, ಮಹಾಲಕ್ಷ್ಮಿಪುರಂ, ವೈಯಾಲಿಕಾವಲ್, ಎಸ್.ಆರ್.ನಗರ, ವಿಜಯನಗರ, ಮಲ್ಲೇಶ್ವರಂ, ಮಾರತ್‍ಹಳ್ಳಿ, ಹನುಮಂತನಗರ, ಸುಬ್ರಹ್ಮಣ್ಯಪುರ, ದೇವನಹಳ್ಳಿ, ಪುಟ್ಟೇನಹಳ್ಳಿ, ವಿದ್ಯಾರಣ್ಯಪುರ, ಮೈಕೋಲೇಔಟ್, ಹೆಣ್ಣೂರು, ಕೊತ್ತನೂರು, ಸಂಪಿಗೆಹಳ್ಳಿ, ಹುಳಿಮಾವು, ಯಲಹಂಕ ನ್ಯೂಟೌನ್, ಜ್ಞಾನಭಾರತಿ, ಹಲಸೂರು, ಕೆ.ಆರ್.ಪುರಂ, ಬಗಲಗುಂಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಹೆಬ್ಬಗೋಡಿ, ಸರ್ಜಾಪುರ, ಅತ್ತಿಬೆಲೆ, ಬನ್ನೇರುಘಟ್ಟ, ಆವಲಹಳ್ಳಿ, ಮಾದನಾಯಕನಹಳ್ಳಿ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ಬಿಡದಿ, ಹಾರೋಹಳ್ಳಿ ಒಳಗೊಂಡಂತೆ ಒಟ್ಟು 32 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 51 ಸರಗಳನ್ನು ಅಪಹರಣ ಮಾಡಿರುವುದು ತನಿಖಾ ಕಾಲದಲ್ಲಿ ತಿಳಿದು ಬಂದಿರುತ್ತದೆ.

ಆರೋಪಿಗಳು ಹೆಲ್ಮೆಟ್ ಧರಿಸಿ ವಿವಿಧ ಬೈಕ್‍ಗಳು ಮತ್ತು ಟಾಟಾಏಸ್ ವಾಹನಗಳನ್ನು ಕೃತ್ಯಕ್ಕೆ ಬಳಸಿಕೊಂಡು ನಕಲಿ ನಂಬರ್ ಪ್ಲೇಟ್‍ಗಳನ್ನು ಹಾಕಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಬೈಕ್‍ಗಳನ್ನು ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದರು.

ಆರೋಪಿ ಸಂತೋಷ್ ಆರ್‍ಟಿಓ ವೆಬ್‍ಸೈಟ್‍ಗೆ ಹೋಗಿ ನಂಬರ್‍ಗಳನ್ನು ನೋಡಿಕೊಳ್ಳುತ್ತಿದ್ದ. ನಂತರ ತನ್ನ ಬೈಕ್‍ಗೆ ನಕಲಿ ನಂಬರ್ ಪ್ಲೇಟ್‍ಗಳನ್ನು ಹಾಕಿಕೊಂಡು ಸರಗಳ್ಳತನಕ್ಕಿಳಿಯುತ್ತಿದ್ದ. ಈತ ಎಲ್ಲಿಯೂ ಹೆಲ್ಮೆಟ್ ತೆಗೆಯುತ್ತಿರಲಿಲ್ಲ. ಹೊಟೇಲ್‍ಗೆ ಹೋದರೂ ಸಹ ಹೆಲ್ಮೆಟ್ ಹಾಕಿಕೊಂಡೇ ಹೋಗುತ್ತಿದ್ದ. ಹಾಗಾಗಿ ಈತ ಪೊಲೀಸರಿಗೆ ಸಿಕ್ತಿರಲಿಲ್ಲ. ಸತತ ಎರಡು ತಿಂಗಳಿನಿಂದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಈತನಿಗಾಗಿ ಹಗಲಿರುಳೆನ್ನದೆ ಶೋಧ ಕಾರ್ಯದಲ್ಲಿ ತೊಡಗಿದ್ದರು.

300 ಕಿ.ಮೀ. ಸಿಸಿ ಟಿವಿ ಪರಿಶೀಲನೆ: ಸರಗಳ್ಳತನ ನಡೆದ ಸ್ಥಳಗಳಿಂದ ಸುಮಾರು 300 ಕಿ.ಮೀ. ವರೆಗೆ ಪೊಲೀಸರು ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆರೋಪಿಯ ಚಹರೆ ಮಾತ್ರ ಗೊತ್ತಾಗುತ್ತಿರಲಿಲ್ಲ. ಆತ ಧರಿಸಿದ್ದ ಹೆಲ್ಮೆಟ್ ಮೇಲಿದ್ದ ಬಿಳಿ ಬಣ್ಣವನ್ನೇ ಆಧಾರವಾಗಿಟ್ಟುಕೊಂಡು ಪತ್ತೆ ಕಾರ್ಯದಲ್ಲಿ ತೊಡಗಿ, ಇದೀಗ ಆತನನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸಂತೋಷ್ ಸತತ ನಾಲ್ಕು ವರ್ಷಗಳಿಂದ ಸರಗಳ್ಳತನಕ್ಕಿಳಿದು ಪೊಲೀಸರ ಕಣ್ತಪ್ಪಿಸಿ ಅಲೆದಾಡುತ್ತಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾನೆ.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮುನಿರೆಡ್ಡಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಉತ್ತಮ ಕಾರ್ಯ ನಿರ್ವಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article