ಬೆಂಗಳೂರು, ಮಾ.27- ಲಂಚಕ್ಕೆ ಕೈಯೊಡ್ಡಿದ್ದ ಹೆಡ್‌ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪೀಣ್ಯದ ಎಸಿಪಿ ಕಚೇರಿ ಬಳಿ ಪೊಲೀಸ್ ಅಧಿಕಾರಿಯ ಜೀಪ್ ಚಾಲಕ ನಾಗರಾಜ್ ಮತ್ತು ಪೀಣ್ಯ ಪೊಲೀಸ್ ಠಾಣೆ ಹೆಡ್‍ಕಾನ್ಸ್‍ಟೆಬಲ್ ಗಂಗಹನುಮಯ್ಯ ಅವರು 50 ಸಾವಿರ ಲಂಚ ಪಡೆಯುವಾಗ ಇನ್ಸ್‍ಪೆಕ್ಟರ್ ವಿಜಯಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿ ನಗದು ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸುಂಕದಕಟ್ಟೆಯ ಮಾರುತಿನಗರದ ಚೇತನ್ ಎಂಬುವವರು ಗ್ಯಾಸ್ ಸಿಲಿಂಡರ್‍ಗಳ ಗೋದಾಮು ತೆರೆಯಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅನುಮತಿ ಪತ್ರ ನೀಡಲು 2 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ಲೋಕಾಯುಕ್ತಕ್ಕೆ ಬಂದ ದೂರಿನ ಆಧಾರದ ಮೇಲೆ ಡಿವೈಎಸ್‍ಪಿ ಉಮಾದೇವಿ ಅವರ ನೇತೃತ್ವದಲ್ಲಿ ನಡೆದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ 50 ಸಾವಿರ ರೂ. ಲಂಚ ಪಡೆಯುವಾಗ ಹೆಡ್‌ಕಾನ್‌ಸ್ಟೆಬಲ್ ಹಾಗೂ ಜೀಪ್ ಚಾಲಕ ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿಯ ಖಾನಾಪುರದ ಕಂದಾಯ ಇಲಾಖೆಯ ಎಇಇ ದುರದುಂಡೇಶ್ವರ ಬನ್ನೂರು ಅವರು 10 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ.
ಗ್ರಾಪಂ ಸದಸ್ಯ ವಿನಾಯಕ್ ಎಂಬುವವರು ಕಾಮಗಾರಿಯೊಂದರ ಅನುಮತಿ ನೀಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಬಂದ ದೂರಿನನ್ವಯ ಇನ್ಸ್‍ಪೆಕ್ಟರ್ ರವಿಕುಮಾರ್ ಅವರ ನೇತೃತ್ವದ ತಂಡ ದಾಳಿ ನಡೆಸಿದಾಗ ಲಂಚ ಪಡೆಯುವ ವೇಳೆ 10 ಸಾವಿರದೊಂದಿಗೆ ಸಿಕ್ಕಿಬಿದ್ದಿದ್ದಾರೆ.
ಇದೇ ಸಂದರ್ಭದಲ್ಲಿ ಅವರ ಮನೆ ಮೇಲೂ ದಾಳಿ ನಡೆಸಿದ ಸಂದರ್ಭದಲ್ಲಿ 27.75 ಲಕ್ಷ ನಗದು ಪತ್ತೆಯಾಗಿದೆ. ಅಧಿಕಾರಿಯನ್ನು ಬಂಧಿಸಿ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.