ಮನೆಗಳ ಬೀಗ ಮೀಟಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರ ಸೆರೆ

Social Share

ಬೆಂಗಳೂರು,ಫೆ.10-ಮನೆಯ ಬೀಗ ಮೀಟಿ ಒಳನುಗ್ಗಿ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರು ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಸಿ 16 ಲಕ್ಷ ರೂ. ಬೆಲೆಯ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ ಮಲ್ವಿನ್ ಮತ್ತು ಮಂಜು ಬಂಧಿತ ಆರೋಪಿಗಳು.
ಜ.7ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಿರ್ಯಾದುದಾರರ ಮಗ ಮನೆಗೆ ಬೀಗ ಹಾಕಿಕೊಂಡು ಕೆಲಸದ ನಿಮಿತ್ತ ಹೊರಗೆ ಹೋಗಿ ಪುನಃ ಸಂಜೆ ವಾಪಸ್ ಬಂದು ನೋಡಿದಾಗ ಮನೆ ಮುಂಬಾಗಿಲಿಗೆ ಹಾಕಿದ್ದ ಬೀಗ ತೆರೆದುಕೊಂಡಿರುವುದನ್ನು ಗಮನಿಸಿದ್ದಾರೆ. ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ಚಿನ್ನದ ಆಭರಣಗಳು, ಬೆಳ್ಳಿ ಆಭರಣಗಳು ಹಾಗೂ ಹಣ ಕಳವು ಮಾಡಿರುವುದು ಕಂಡುಬಂದಿದೆ. ತಕ್ಷಣ ವಿಜಯನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇನ್‍ಸ್ಪೆಕ್ಟರ್ ಸತೀಶ್‍ಕುಮಾರ್ ಹಾಗೂ ಸಿಬ್ಬಂದಿ ಆರೋಪಿಯೊಬ್ಬನನ್ನು ಬಂಧಿಸಿ ಈತ ನೀಡಿದ ಹೇಳಿಕೆ ಮೇರೆಗೆ ಮತ್ತೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ ಸ್ಕೂಟರ್ ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳು ವಿಜಯನಗರ, ಕೆಂಗೇರಿ ಹಾಗೂ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆಕಳ್ಳತನ ಮಾಡಿದ್ದಾಗಿ ತಿಳಿಸಿದ ಮೇರೆಗೆ 16 ಲಕ್ಷ ರೂ. ಬೆಲೆಯ 360 ಗ್ರಾಂ ಚಿನ್ನಾಭರಣ , ಒಂದು ಜೊತೆ ಬೆಳ್ಳಿಯ ಗೆಜ್ಜೆ, ಒಂದು ಸುಜುಕಿ ಸ್ಕೂಟರ್ ಹಾಗೂ ಕಳ್ಳತನ ಮಾಡಿದ ಚಿನ್ನದ ಆಭರಣದ ಮಾರಾಟ ಮಾಡಿ ಬಂದಂತಹ ಹಣದಲ್ಲಿ ಖರೀದಿಸಿದ್ದ ಒಂದು ಸ್ಕೂಟರ್ ವಶಪಡಿಸಿಕೊಳ್ಳುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Articles You Might Like

Share This Article