ಬೆಂಗಳೂರು,ಸೆ.21-ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಶಂಕಿತ ಇಬ್ಬರು ಉಗ್ರರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರು, ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶೋಧ ನಡೆಸುತ್ತಿದ್ದಾರೆ.
ಬಂಧಿತನಾಗಿರುವ ಶಂಕಿತ ಉಗ್ರ ಸಯ್ಯದ್ ಯಾಸೀನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರೆ, ಮುನೀರ್ ಅಹಮ್ಮದ್ ಸಹ ಬಿಇ ಪದವೀಧರ. ತಲೆಮರೆಸಿಕೊಂಡಿರುವ ಶಾರಿಕ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ
ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ನಡೆದಿದ್ದ ಘಟನೆ ಸಂದರ್ಭದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತನ ಮೊಬೈಲ್ ಪರಿಶೀಲಿಸಿದಾಗ ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ಇದೀಗ ಐಸಿಸ್ ಉಗ್ರ ಸಂಘಟನೆಯ ನಂಟು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಸಿ ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ತುಂಗಭದ್ರ ನದಿ ದಂಡೆ ಮೇಲೆ ಬಾಂಬ್ ತಯಾರಿಸಿ ನದಿಗೆ ಎಸೆದಿದ್ದ ಬಗ್ಗೆ ಶಂಕಿತ ಉಗ್ರರು ಬಾಯ್ಬಿಟ್ಟಿದ್ದು, ಇಂದು ನದಿ ಸಮೀಪ ಸ್ಥಳ ಮಹಜರಿಗೆ ಕರೆದೊಯ್ದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಅಬ್ಬಲಗೆರೆ ಗ್ರಾಮದ ಹಲವೆಡೆ ಸ್ಥಳ ಮಹಜರು ಮಾಡಿಸಿದ್ದಾರೆ. ಅಲ್ಲದೆ ಶಂಕಿತರ ಚಲನವಲನಗಳಿದ್ದ ಪ್ರತಿಯೊಂದು ಸ್ಥಳವನ್ನು ಮಹಜರು ಮಾಡಿಸಿ ಮತ್ತೆ ಠಾಣೆಗೆ ಕರೆದೊಯ್ದಿದ್ದಾರೆ.
ವೈದ್ಯಕೀಯ ಪರೀಕ್ಷೆ: ವೈದ್ಯಕೀಯ ಪರೀಕ್ಷೆಗಾಗಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಪೊಲೀಸರು ಭಾರೀ ಬಿಗಿಭದ್ರತೆಯಲ್ಲಿ ಶಂಕಿತ ಉಗ್ರರನ್ನು ಕರೆತಂದರು.