ಆಂಟಿಗುವಾ ಫೆ.6- ಭಾರತ ಅಂಡರ್ 19 ತಂಡವು 5ನೆ ಬಾರಿ ವಿಶ್ವ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅಲ್‍ರೌಂಡರ್ ಆಟಗಾರ ರಾಜಬಾವಾಗೆ 2011ರಲ್ಲಿ ಭಾರತ 2ನೆ ಬಾರಿಗೆ ವಿಶ್ವ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯುವರಾಜ್‍ಸಿಂಗ್ ಅವರೇ ರೋಲ್ ಮಾಡೆಲ್ ಅಂತೆ.
ನಿನ್ನೆ ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧದ ಪಂದ್ಯದಲ್ಲಿ ರಾಜಾ ಬಾವ ಅವರು ಆಂಗ್ಲರ ಬ್ಯಾಟಿಂಗ್ ಜಂಘಾಬಲವನ್ನೇ ಕುಗ್ಗಿಸಿ 5 ವಿಕೆಟ್ ಕಬಳಿಸಿದ್ದಲ್ಲದೆ 35 ರನ್ ಗಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ರಾಜಬಾವಾ ಅವರು ಲೀಗ್ ಪಂದ್ಯದಲ್ಲಿ ಉಗಂಡಾ ತಂಡದ ವಿರುದ್ಧ 108 ಎಸೆತಗಳಲ್ಲೇ 162 ರನ್‍ಗಳಿಸುವ ಮೂಲಕ ಗಮನ ಸೆಳೆದಿದ್ದರು.
ರಾಜ ಬಾವಾ ಅವರ ಕುಟುಂಬಕ್ಕೆ ಕ್ರೀಡಾ ಹಿನ್ನೆಲೆ ಇದೆ. ಇವರ ತಾತಾ ತಾರ್ಲೊಚಾನ್ ಸಿಂಗ್ ಬಾವಾ ಅವರು ಒಬ್ಬ ಉತ್ತಮ ಹಾಕಿ ಪಟುವಾಗಿದ್ದು, 1948ರಲ್ಲಿ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ರಾಜಬಾವಾ ಅವರ ತಂದೆ ಸುಕ್ವೀಂದರ್ ಬಾವಾ ಅವರು ಕೂಡ ಉತ್ತಮ ಕ್ರಿಕೆಟಿಗರಾಗಿದ್ದರು, ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಲೌಂಡರ್ ಆಗಿದ್ದ ಯುವರಾಜ್‍ಸಿಂಗ್ ಹಾಗೂ ವಿಆರ್‍ವಿ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರಿಗೆ ತರಬೇತುದಾರರಾಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಾ ಬಾವಾ ಅವರು ನಮ್ಮ ತಂದೆ ಯುವರಾಜ್‍ಸಿಂಗ್‍ಗೆ ತರಬೇತಿ ನೀಡುತ್ತಿದ್ದರು, ನಾನು ಚಿಕ್ಕವನಾಗಿದ್ದಾಗ ಅವರು ನೆಟ್ಸ್‍ನಲ್ಲಿ ಯುವಿಗೆ ನೀಡುತ್ತಿದ್ದ ತರಬೇತಿ ಶೈಲಿ ಹಾಗೂ ಅನೇಕ ವಿಡಿಯೋ ಕ್ಲಿಪ್‍ಗಳನ್ನು ನೋಡಿ ಪ್ರೇರೇಪಿತನಾಗಿದ್ದೆ, ಯುವರಾಜ್‍ಸಿಂಗ್ ಅವರು ಧರಿಸುತ್ತಿದ್ದ 12 ನಂಬರ್ ಜೆರ್ಸಿಯನ್ನೇ ಇಂದು ನನ್ನ ಜೆರ್ಸಿ ನಂಬರ್ ಆಗಿ ಆಯ್ಕೆ ಮಾಡಿಕೊಂಡಿದ್ದೇನೆ.
ರಾಜ ಬಾವಾ ಅವರ ತಂದೆ ಸುಖ್ವೀಂದರ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗ ಬಾಲ್ಯದಲ್ಲಿ ಎಡಗೈ ಬ್ಯಾಟ್ಸ್‍ಮನ್ ಆಗಿದ್ದನು, ಆದರೆ ಯಾವಾಗ ಯುವರಾಜ್‍ಸಿಂಗ್‍ರನ್ನು ಅನುಸರಿಸಿ ಬಲಗೈ ಬ್ಯಾಟ್ಸ್‍ಮನ್ ಆದನೋ ಅಂದಿನಿಂದ ಅವನ ಬ್ಯಾಟಿಂಗ್ ವೈಭವ ಶುರುವಾಯಿತು, ಇಂದು ಅವನು ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿರುವುದು ನನಗೆ ಭಾರೀ ಹೆಮ್ಮೆಯಾಗಿದೆ, ಅವರ ಕ್ರಿಕೆಟ್ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
