ನ್ಯೂಯಾರ್ಕ್,ಜು.15-ರಷ್ಯಾದ ರಕ್ಷಣೆ ಮತ್ತು ಗುಪ್ತಚರ ವ್ಯವಹರಿಸುವ ದೇಶಗಳಿಗೆ ದಂಡನಾತ್ಮಕ ಕ್ರಮಗಳನ್ನು ಜಾರಿಗೊಳಿಸುವ ಕಾಟ್ಸ(ಸಿಎಎಟಿಎಸ್‍ಎ)ಕಾಯ್ದೆಯಿಂದ ಭಾರತಕ್ಕೆ ವಿನಾಯ್ತಿ ನೀಡುವ ಮಹತ್ವದ ತಿದ್ದುಪಡಿಗೆ ಅಮೆರಿಕ ಸಂಸತ್ ಅಂಗೀಕಾರ ನೀಡಿದೆ.
ಭಾರತೀಯ ಮೂಲದ ಸಂಸದರಾದ ರೋ ಖನ್ನಾ ಅವರು ಮಂಡಿಸಿದ್ದ ರಾಷ್ಟ್ರೀಯ ರಕ್ಷಣಾ ಅಧಿಕೃತ ಕಾಯ್ದೆ ತಿದ್ದುಪಡಿಯನ್ನು ಧ್ವನಿ ಮತದ ಮೂಲಕ ಅಮೆರಿಕ ಸಂಸತ್ ಅಂಗೀಕರಿಸಿದೆ. 2017ರಲ್ಲಿ ಅಮೆರಿಕ ಕಾಂಗ್ರೆಸ್ ಕಾಟ್ಸ ಕಾಯ್ದೆಯನ್ನು ಜಾರಿಗೊಳಿಸಿತ್ತು.
ಈ ಕಾಯ್ದೆ ಮೂಲಕ ರಷ್ಯಾದೊಂದಿಗೆ ರಕ್ಷಣಾ ವಹಿವಾಟುಗಳನ್ನು ನಡೆಸುವ ದೇಶಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಭಾರತ ದೇಶಕ್ಕೆ ಪ್ರತ್ಯೇಕವಾಗಿ ವಿನಾಯ್ತಿ ನೀಡಲಾಗಿದೆ.
ಭಾರತ ಸರ್ಕಾರ ಇತ್ತೀಚೆಗಷ್ಟೇ ರಷ್ಯಾದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದಗಳಿಗೆ ಸಹಿ ಹಾಕಿತ್ತು. ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡುವೆಯೂ ಮಾಸ್ಕೋ ಮತ್ತು ದೆಹಲಿ ನಡುವೆ ನಡೆದ ಹೊಸ ಒಪ್ಪಂದ ಉಬ್ಬೇರಿಸುವಂತೆ ಮಾಡಿದೆ.
ಅದರ ನಡುವೆ ಕೂಡ ಅಮೆರಿಕ ಸಂಸತ್ ಭಾರತಕ್ಕೆ ನಿಬಂಧನೆಗಳ ದಂಡನೆಗಳಿಂದ ವಿನಾಯ್ತಿ ನೀಡಿದೆ. 4 ಭಾಗಗಳಲ್ಲಿರುವ ತಿದ್ದುಪಡಿ ಕಾಯ್ದೆ ಅಂಗೀಕಾರದಿಂದ ಭಾರತ ಮತ್ತು ಅಮೆರಿಕ ನಡುವಿನ ವಿಪಕ್ಷೀಕಯ ಒಪ್ಪಂದಗಳು, ವ್ಯಾಪಾರ ವಹಿವಾಟುಗಳು ಮತ್ತಷ್ಟು ಸದೃಢಗೊಳ್ಳಲಿವೆ ಎಂದು ರೋ ಖನ್ನಾ ವಿಶ್ಲೇಶಷಿಸಿದ್ದಾರೆ.
ಚೀನಾ ಗಡಿ ಭಾಗದಲ್ಲಿ ಸೃಷ್ಟಿಸುತ್ತಿರುವ ವಿಕೋಪಗಳ ನಡುವೆ ಅಮೆರಿಕ ಸಂಸತ್‍ನ ಈ ವಿನಾಯ್ತಿ ಭಾರತಕ್ಕೆ ಹೊಸ ಬೆಂಬಲ ನೀಡಿದೆ. ಅಮೆರಿಕ ಕೂಡ ಚೀನಾದಿಂದ ಬೆದರಿಕೆಯನ್ನು ಎದುರಿಸುತ್ತಿದ್ದು, ಉಭಯ ದೇಶಗಳ ರಕ್ಷಣಾತ್ಮಕ ಒಪ್ಪಂದಗಳು ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಲಾಗಿದೆ.