ಬೆಂಗಳೂರು,ಮಾ.8- ಭಜರಂಗದಳ ಕಾರ್ಯಕರ್ತ ಹರ್ಷ(28) ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ 1967ರ ಕಾನೂನು ಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯ ಕೆಲವು ಸೆಕ್ಷನ್‍ಗಳನ್ನು ಹಾಕಿದ್ದಾರೆ.
ಇದೇ ವೇಳೆ ಕಳೆದ 11 ದಿನಗಳಿಂದ ಪೊಲೀಸ್ ವಶದದಲ್ಲಿದ್ದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಮುಖ ಆರೋಪಿ ಬುದ್ಧನಗರ ನಿವಾಸಿ ಮಹಮ್ಮದ್ ಖಾಸಿಫ್ (30) ಸೇರಿದಂತೆ ಸೈಯದ್ ನದೀಮ್, ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಫ್ನಾನ್, ನಿಹಾನ್, ಫರಾಜ್ ಪಾಷಾ, ಅಬ್ದುಲ್ ಖಾದರ್ ಜಿಲಾನ್, ಅಬ್ದುಲ್ ರೋಷನ್ ಮತ್ತು ಜಾಫರ್ ಸಾದಿಕ್‍ನನ್ನು ಬಂಧಿಸಲಾಗಿತ್ತು.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಫೆ.25ರಿಂದ 11 ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಘಟನೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದರು ಎನ್ನಲಾಗಿದೆ.
ಫೆ.20ರಂದು ಭಜರಂಗದಳ ಕಾರ್ಯಕರ್ತ ಹರ್ಷನನ್ನು ಶಿವಮೊಗ್ಗದ ಎನ್‍ಟಿ ರಸ್ತೆಯ ಕಾಮತ್ ಪೆಟ್ರೋಲ್ ಪಂಪ್ ಬಳಿ ಯುವಕರ ಗುಂಪು ಹತ್ಯೆ ಮಾಡಿತ್ತು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಭಾರೀ ಪ್ರತಿಭಟನೆ, ಕಲ್ಲು ತೂರಾಟ, ಗಲಾಟೆಗದ್ದಲ ನಡೆದಿತ್ತು. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಅಕಾರಿಗಳು ನಗರದಾದ್ಯಂತ ಒಂದು ವಾರದವರೆಗೆ ನಿಷೇಧಾಜ್ಞಾ ಜಾರಿಗೊಳಿಸಿದ್ದರು.
ಹರ್ಷನ ನಿವಾಸಕ್ಕೆ ಭೇಟಿ ನೀಡಿದ್ದ ವಿವಿಧ ಪಕ್ಷಗಳ ನಾಯಕರು ಹಾಗೂ ಸರ್ಕಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಪರಿಹಾರ ನೀಡಿದೆ.
