ಉಕ್ರೇನ್‍ನಿಂದ ಇಂದು 65 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್

Social Share

ಬೆಂಗಳೂರು,ಮಾ.7- ಉಕ್ರೇನ್‍ನಿಂದ ಇಂದು ಬೆಳಗ್ಗೆ 65 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದು, ರಾಜ್ಯಕ್ಕೆ ಮರಳಿದವರ ಸಂಖ್ಯೆ 476ಕ್ಕೆ ಏರಿಕೆಯಾಗಿದೆ. ಯುದ್ಧಪೀಡಿತ ಉಕ್ರೇನ್‍ನಿಂದ ಇಂದು 6 ವಿಮಾನಗಳು ಮುಂಬೈ ಮತ್ತು ದೆಹಲಿಗೆ ಬರುತ್ತಿದ್ದು, ಅದರಲ್ಲಿ ಬಹಳಷ್ಟು ಕನ್ನಡಿಗರು ಬರುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮತ್ತು ನೋಡೆಲ್ ಅಧಿಕಾರಿ ಡಾ.ಮನೋಜ್‍ರಾಜನ್ ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಆಗಮಿಸಿದ 65 ವಿದ್ಯಾರ್ಥಿಗಳನ್ನು ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇನ್ನು 163 ವಿದ್ಯಾರ್ಥಿಗಳು ಉಕ್ರೇನ್‍ನಿಂದ ಬರುತ್ತಿರುವ ಮಾಹಿತಿ ನಿಯಂತ್ರಣ ಕೊಠಡಿಗೆ ಬಂದಿದೆ. ಈಗ ಬಂದಿರುವ ವಿದ್ಯಾರ್ಥಿಗಳಲ್ಲಿ ರುಮೇನಿಯಾ, ಪೊಲೆಂಡ್ ಗಡಿ ಭಾಗದಿಂದ ಬಂದಿರುವವರು ಹೆಚ್ಚಾಗಿದ್ದಾರೆ. ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿರುವ ಇತರೆ ಉಳಿದವರನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ಸುಮಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ 6-7 ಮಂದಿ ಕರೆತರುವ ಸಿದ್ಧತೆಯೂ ನಡೆಸಲಾಗುತ್ತಿದೆ. ರಾತ್ರಿ ವೇಳೆಗೆ ಬಹಳಷ್ಟು ವಿದ್ಯಾರ್ಥಿಗಳು ಮರಳುವ ನಿರೀಕ್ಷೆ ಇದೆ ಎಂದರು. ಆಪರೇಷನ್ ಗಂಗಾ ಹೆಸರಿನಲ್ಲಿ 51 ವಿಮಾನಗಳ ಮೂಲಕ ಭಾರತೀಯರನ್ನು ಕರೆತರಲಾಗಿದ್ದು, ಅವರಲ್ಲಿ ರಾಜ್ಯದ 476 ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಇಂದು ಸಂಜೆ ವೇಳೆಗೆ ಮುಂಬೈಗೆ 2 ಹಾಗೂ ದೆಹಲಿಗೆ 4 ವಿಮಾನಗಳು ಬರುತ್ತಿದ್ದು, ಅದರಲ್ಲೂ ಕನ್ನಡಿಗರು ಬರುವ ಸಾಧ್ಯತೆಗಳಿವೆ ಎಂದು ಹೇಳಿದರು.
ಫೆ.27ರಿಂದಲೂ ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮಾ.3ರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಐದನೇ ದಿನವಾದ ಇಂದೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

Articles You Might Like

Share This Article