ಉಕ್ರೇನ್‍ನಲ್ಲಿ ಭಾರತೀಯರನ್ನು ಕಾಪಾಡಿದ ತ್ರಿವರ್ಣ ಧ್ವಜ

Social Share

ದಾವಣಗೆರೆ, ಫೆ.2- ಭಾರತದ ತ್ರಿವರ್ಣ ಧ್ವಜ ಕಂಡರೆ ಉಕ್ರೇನ್ ಹಾಗೂ ರಷ್ಯಾದವರು ತುಂಬಾನೇ ಗೌರವ ಕೊಡುತ್ತಿದ್ದರು. ಯಾವುದೇ ಸಮಸ್ಯೆ ಮಾಡುತ್ತಿರಲಿಲ್ಲ. ಬದಲಿಗೆ ನಿಮಗೇನೂ ಮಾಡುವುದಿಲ್ಲ, ಆತಂಕಕ್ಕೆ ಒಳಗಾಗಬೇಡಿ ಎಂಬುದಾಗಿ ಧೈರ್ಯ ತುಂಬುತ್ತಿದ್ದರು. ಇದು ಉಕ್ರೇನ್‍ನಲ್ಲಿ ಸಂಕಷ್ಟಕ್ಕೊಳಗಾಗಿ ಸುರಕ್ಷಿತವಾಗಿ ದಾವಣಗೆರೆಗೆ ಮರಳಿರುವ ಮಹ್ಮದ್ ಹಬೀಬ್ ಅಲಿ ಎಂಬ ವಿದ್ಯಾರ್ಥಿ ಅಲ್ಲಿನ ಪರಿಸ್ಥಿತಿ ಬಗ್ಗೆ ಹಂಚಿಕೊಂಡಿರುವ ಮನದಾಳದ ಮಾತು.
ದಾವಣಗೆರೆಯ ಭಗತ್ ಸಿಂಗ್ ನಗರ ವಾಸಿ ಹಬೀಬ್ ಅಲಿ, ಉಕ್ರೇನ್‍ನ ಚರ್ನಿವಿಸ್ತಿಯಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ ತೆರಳಿದ್ದ ಇವರು, ಯುದ್ಧ ಪ್ರಾರಂಭವಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಹಬೀಬ್ ಅಲಿ ಸೇರಿದಂತೆ ಇತರೆ ವಿದ್ಯಾರ್ಥಿಗಳನ್ನು ಯುನಿವರ್ಸಿಟಿಯ ಹಾಸ್ಟೆಲ್‍ನಲ್ಲಿಯೇ ಇರಿಸಲಾಗಿತ್ತು.
ಆ ಹಾಸ್ಟೇಲ್‍ಗೆ ಭಾರತದ ತ್ರಿವರ್ಣ ಧ್ವಜ ಹಾಕಿದ್ದರಿಂದಲೇ ತಾವು ಬಚಾವ್ ಆಗಿದ್ದಾಗಿ ಹಬೀಬ್ ಅಲಿ ಹೇಳಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದಕ್ಕೆ ದೇಶದ ತ್ರಿವರ್ಣ ಧ್ವಜ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಉಕ್ರೇನ್ ಚರ್ನಿವಿಸ್ತಿಯಿಂದ 35ಕಿ.ಮೀ. ದೂರದ ರುಮೇನಿಯಾಕ್ಕೆ ಬಸ್ ಮೂಲಕ ಹಾಗೂ ಅಲ್ಲಿಂದ ಬುಕಾರೇಸ್‍ಗೆ ಕರೆತಂದ ಭಾರತದ ರಾಯಭಾರ ಕಚೇರಿಯವರು, ಬಳಿಕ ವಿಮಾನದಲ್ಲಿ ಭಾರತಕ್ಕೆ ಏರ್ ಲಿಫ್ಟ್ ಮಾಡಿದ್ದಾರೆ. ನಂತರ ಮುಂಬೈ ಮೂಲಕ ದಾವಣಗೆರೆಗೆ ಹಬೀಬ್ ಅಲಿ ಬಂದಿಳಿದಿದ್ದಾರೆ. ಮಗ ಸುರಕ್ಷಿತವಾಗಿ ಮರಳಿದ್ದಕ್ಕೆ ತಂದೆ ಶೌಕತ್ ಅಲಿ ಸೇರಿದಂತೆ ಕುಟುಂಬದವರು, ಸಂಬಂಕರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತ ಧ್ವಜ ನೋಡಿದಾಕ್ಷಣ ರಷ್ಯಾ ಹಾಗೂ ಉಕ್ರೇನ್ ಸೈನಿಕರು ಏನೂ ಮಾಡುತ್ತಿರಲಿಲ್ಲ. ನಾವಿದ್ದ ಹಾಸ್ಟೆಲ್‍ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಕಲಾಗಿತ್ತು. ಹೀಗಾಗಿ ಉಕ್ರೇನ್ ಹಾಗೂ ರಷ್ಯಾ ಸೈನಿಕರೇ ನಮಗೆ ಭದ್ರತೆ ನೀಡಿದ್ದರು. ಭಾರತೀಯರನ್ನು ಬಿಟ್ಟು ಬೇರೆ ದೇಶದವರಿಗೆ ತಮ್ಮ ರಾಷ್ಟ್ರಧ್ವಜ ಹಾಕಲು ಅನುಮತಿ ಕೊಟ್ಟಿರಲಿಲ್ಲ.
ಆದರೆ, ನಮಗೆ ಮಾತ್ರ ಭಾರತದ ಧ್ವಜ ಹಾಕಲು ಅವಕಾಶ ನೀಡಿದ್ದರು. ಹಾಗಾಗಿ ಈಜಿಪ್ಟ್ ಸೇರಿದಂತೆ ಬೇರೆ ದೇಶದವರೂ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯರು ಮಾತ್ರ ಸುರಕ್ಷಿತರಾಗಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ವಾಪಸ್ ಭಾರತಕ್ಕೆ ಮರಳಬೇಕು ಎಂಬುದು ನನ್ನ ಆಸೆ ಎಂದು ಹಬೀಬ್ ಅಲಿ ಪ್ರಾರ್ಥಿಸಿದ್ದಾರೆ.
ಸದ್ಯ ಉಕ್ರೇನ್‍ನಲ್ಲಿ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಅನ್ನ, ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಎಲ್ಲ ಕಡೆ ಕಫ್ರ್ಯೂ ಹಾಕಲಾಗಿದೆ. ಯಾರು ಹೊರಗೆ ಹೋಗುವಂತಿಲ್ಲ. ಚರ್ನಿವಿಸ್ತಿ, ಕಾರ್ಕಿವ್ ಹಾಗೂ ಕೀವ್‍ನಲ್ಲಿ ಕರ್ನಾಟಕದ ಇನ್ನೂ ಬಹಳಷ್ಟು ಜನರಿದ್ದು, ಬಂಕರ್, ನೆಲಮಹಡಿಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಅವರೆಲ್ಲರನ್ನು ಕರೆತರಲು ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರಷ್ಯಾ ದಾಳಿಗೆ ಒಳಗಾಗಿರುವ ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ನಮ್ಮ ತ್ರಿವರ್ಣ ಧ್ವಜವೇ ಕಾಪಾಡುತ್ತಿದೆ. ರಷ್ಯಾ ಹಾಗೂ ಉಕ್ರೇನ್‍ನವರಿಗೆ ಭಾರತ ಅಂದ್ರೆ ತುಂಬಾನೇ ಇಷ್ಟ. ಇಲ್ಲಿನ ಜನರಿಗೆ ಅವರೇ ಸಹಾಯ ಮಾಡುತ್ತಿದ್ದಾರೆ. ಬೇರೆ ರಾಷ್ಟ್ರದವರಿಗೆ ಹೋಲಿಸಿದರೆ ಮೊದಲು ನಮ್ಮ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ.
ಕನ್ನಡಿಗರೂ ಸೇರಿದಂತೆ ಸಾವಿರಾರು ಭಾರತೀಯರು ಅಲ್ಲಿದ್ದು, ಇಂಟರ್‍ನೆಟ್, ಮೊಬೈಲ್ ಸಂಪರ್ಕ ಸಾಧ್ಯವಾಗದ ಕಾರಣ ಕೆಲವರು ಮಾತನಾಡಲು ಸಿಗುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ಸಂಪರ್ಕಕ್ಕೆ ಬಂದಿದ್ದರು. ಆದರೆ ಈಗ ಸಾಧ್ಯವಾಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.

Articles You Might Like

Share This Article