ನವದೆಹಲಿ, ಫೆ.26- ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ದೆಹಲಿಯಿಂದ ರೊಮೇನಿಯಾದ ಬುಚರೆಸ್ಟ್, ಹಂಗೇರಿಯಾದ ಬುದಪೆಸ್ಟ್‍ಗೆ ಎರಡು ವಿಮಾನಗಳು ತೆರಳಿವೆ. ಭಾರತೀಯ ವಿದೇಶಾಂಗ ಇಲಾಖೆಯ ಮಾಹಿತಿ ಆಧರಿಸಿ ವಿಮಾನಗಳು ಸಂಚರಿಸುತ್ತಿವೆ.
ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯರು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸದೆ ಗಡಿಗಳತ್ತ ಪ್ರಯಾಣ ಮಾಡಬೇಡಿ ಎಂದು ಉಕ್ರೇನ್ ನಲ್ಲಿರುವ ಉಕ್ರೇನ್ ಭಾರತೀಯ ರಾಯಬಾರಿ ಕಚೇರಿ ಇಂದು ಹೊಸದಾಗಿ ಆದೇಶ ಹೊರಡಿಸಿದೆ.
ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದವರು ಆತಂಕಕ್ಕೆ ಒಳಗಾಗಿ ಸುರಕ್ಷಿತತಾಣಗಳಲ್ಲಿ ಅಡಗಿ ಕುಳಿತಿದ್ದಾರೆ. ಸುಮಾರು 20 ಗಂಟೆಗಳಿಂದ ಅವರಿಗೆ ಆಹಾರ, ನೀರಿನ ಸಮಸ್ಯೆ ಎದುರಾಗಿದೆ. ನೆಲಮಹಡಿಗಳಲ್ಲಿರುವ ಅಡಗುತಾಣಗಳನ್ನು ಬಿಟ್ಟು ಹೊರಗೆ ಬಂದರೆ ಬಾಂಬ್ ಸ್ಪೋಟದ ಆತಂಕ ಇದೆ.
ಜೀವವನ್ನು ಅಂಗೈನಲ್ಲಿ ಹಿಡಿದು ಬದುಕುತ್ತಿರುವವರು ತಾಯ್ನಾಡಿಗೆ ಮರಳಲು ಆತುರದಲ್ಲಿದ್ದಾರೆ. ನಿನ್ನೆವರೆಗಿನ ಪರಿಸ್ಥಿತಿ ಆಧರಿಸಿ ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಗಡಿಗಳತ್ತ ಬರಲು ಸೂಚನೆ ನೀಡಿತ್ತು. ವಾಹನಗಳಿಗೆ ಭಾರತದ ರಾಷ್ಟ್ರಧ್ವಜ ಹಾಕಿಕೊಂಡು ಸುರಕ್ಷಿತ ಮಾರ್ಗಗಳ ಮೂಲಕ ಗಡಿ ಭಾಗಗಳಿಗೆ ಬನ್ನಿ ಎಂದು ಕರೆ ನೀಡಿತ್ತು. ಏಕಕಾಲಕ್ಕೆ ಸಾವಿರಾರು ಮಂದಿ ಆಗಮಿಸಿದ್ದು ರಾಜತಾಂತ್ರಿಕ ಸಮಸ್ಯೆ ಎದುರಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಏಕಾಏಕಿ ಗಡಿ ಭಾಗಕ್ಕೆ ಬರಬೇಡಿ, ಭಾರತೀಯ ಸರ್ಕಾರದ ಅಧಿಕಾರಿ ಗಳ ಜೊತೆ ಚರ್ಚೆ ಮಾಡಿ ನಂತರ ಬನ್ನಿ ಎಂದು ಸೂಚಿಸಲಾಗಿದೆ. ಈ ನಡುವೆ ನೇಪಾಳದ ಸರ್ಕಾರ ಕೂಡ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತರಲು ಸಹಕರಿಸುವಂತೆ ಭಾರತೀಯ ಸರ್ಕಾರಕ್ಕೆ ಮನವಿ ಮಾಡಿದೆ. ನೇಪಾಳ ತನ್ನ ರಾಯಬಾರಿ ಕಚೇರಿಯನ್ನು ಉಕ್ರೇನ್ ನಲ್ಲಿ ಹೊಂದಿಲ್ಲ. ಹೀಗಾಗಿ ಭಾರತವೇ ನಮಗೆ ನೆರವು ನೀಡಬೇಕು ಎಂದು ನೇಪಾಳ ಮನವಿ ಮಾಡಿದೆ.
ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲಾಗುವುದು. ವಿದ್ಯಾರ್ಥಿಗಳ ವಿಷಯದಲ್ಲಿ ಯಾವುದೇ ಆತಂಕ ಬೇಡ ಎಂದು ವಿದೇಶಾಂಗ ಇಲಾಖೆ ಭರವಸೆ ನೀಡಿದೆ. ಉಕ್ರೇನ್ ನಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಮತ್ತು ಲಸಿಕೆಯ ಪ್ರಮಾಣ ಪತ್ರದಿಂದ ವಿನಾಯಿತಿ ನೀಡಲಾಗಿದೆ. ಕೇರಳ ಸರ್ಕಾರ ಉಕ್ರೇನ್ ನಿಂದ ಆಗಮಿಸುವವ ಕೇರಳಿ ಯನ್ನರಿಗೆ ವಿಮಾನಯಾನದ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ. ಎಲ್ಲಾ ರಾಜ್ಯಗಳು ತಮ್ಮವರ ಸುರಕ್ಷತೆಗಾಗಿ ತೀವ್ರ ನಿಗಾವಹಿಸಿವೆ.
