ಕ್ಯಿವ್,ಮಾ.5- ಬೃಹತ್ ಸೇನಾ ಶಕ್ತಿ ಹೊಂದಿರುವ ರಷ್ಯಾದ ವಿರುದ್ಧ ಸೆಟೆದು ನಿಂತು ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಜೆಲೆನ್ಸ್ಕಿ ಮೂರು ಹತ್ಯಾ ಪ್ರಯತ್ನಗಳಿಂದ ಪಾರಾಗಿದ್ದಾರೆ. ಆಕ್ರಮಣಕಾರಿ ರಷ್ಯಾ ಉಕ್ರೇನ್ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಹಾಲಿ ಅಧ್ಯಕ್ಷ ಜೆಲೆನ್ಸ್ಕಿಯನ್ನು ಹತ್ಯೆ ಮಾಡಿಯಾದರೂ ಸರಿ ತಮಗೆ ಬೇಕಾದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನಿಸುತ್ತಿದೆ.
ಹೀಗಾಗಿ ಯುದ್ಧ ಆರಂಭವಾದ ದಿನದಿಂದ ಜೆಲೆನ್ಸ್ಕಿ ಹತ್ಯೆಗೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಇದಾವುದಕ್ಕೂ ಜಗ್ಗದ ಜೆಲೆನ್ಸ್ಕಿ ತಾವು ಉಕ್ರೇನ್ ಬಿಟ್ಟು ಹೋಗುವುದಿಲ್ಲ. ಕೊನೆ ಕ್ಷಣದವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಜೆಲೆನ್ಸ್ಕಿ ಉಕ್ರೇನ್ ಬಿಟ್ಟು ಪರಾರಿಯಾಗಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಪೋಲ್ಯಾಂಡ್ ಸೇರಿಕೊಂಡಿದ್ದಾರೆ ಎಂದು ರಷ್ಯಾದ ಸ್ಪೀಕರ್ ವೆಚೆಸ್ಲವ್ ಓಲೋಡಿನ್ ಹೇಳಿದ್ದರು. ಆದರೆ ಉಕ್ರೇನ್ನ ಪ್ರಮುಖರು ಇದನ್ನು ತಳ್ಳಿ ಹಾಕಿದ್ದಾರೆ. ಅಧ್ಯಕ್ಷರು ದೇಶ ಬಿಟ್ಟು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .
ನಿನ್ನೆ ಸಂಜೆ ಟ್ವೀಟ್ ಮಾಡಿರುವ ಜೆಲೆನ್ಸ್ಕಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಯುದ್ದಪೀಡಿತ ಜೆಲೆನ್ಸ್ಕಿ ಯಾವುದೇ ಬಿಗಿಭದ್ರತೆ ಇಲ್ಲದೆ ಕ್ಯಿವ್ ನಗರದಲ್ಲಿ ಸಂಚರಿಸುತ್ತಿದ್ದರು. ಕಾಲಕಾಲಕ್ಕೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಮಾಹಿತಿ ನೀಡುತ್ತಿದ್ದರು. ವಿದೇಶಿ ನಾಯಕರ ಜೊತೆ ಸಮಾಲೋಚನೆ ನಡೆಸಿ ಶಸ್ತ್ರಾಸ್ತ್ರ ಹಾಗೂ ಆರ್ಥಿಕ ಸಂಪನ್ಮೂಲ ಕ್ರೌಢೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ.
