ನವದೆಹಲಿ,ಮಾ.9- ಯುದ್ಧಪೀಡಿತ ಉಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರ ನಡುವೆ ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಪಾಕಿಸ್ತಾನಕ್ಕೆ ಮರಳಿದ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.
ಪಾಕಿಸ್ತಾನಿ ಯುವತಿ ಅಸ್ಮಾ ಶಫೀಕ್ ವಿದ್ಯಾರ್ಥಿನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ಉಕ್ರೇನ್‍ನ ಯುದ್ಧ ವಲಯದಿಂದ ಸ್ಥಳಾಂತರ ಗೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ವೀಡಿಯೋ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ್ದಾರೆ.
ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಇಲ್ಲಿ ಎಲ್ಲಾ ರೀತಿಯಲ್ಲಿ ನಮಗೆ ಬೆಂಬಲ ನೀಡಿದ ಕೀವ್‍ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಮಗೆ ಕೀವ್‍ನಿಂದ ಪಾರಾಗಲು ಸಹಾಯ ಮಾಡಿದ ಭಾರತೀಯ ರಾಯಭಾರ ಕಚೇರಿಗೂ ಹಾಗೂ ಪ್ರಧಾನಿಗೂ ಧನ್ಯವಾದ. ನಾವು ಸುರಕ್ಷಿತವಾಗಿ ಮನೆಗೆ ತಲುಪುತ್ತೇವೆ ಎಂಬ ನಂಬಿಕೆಯಿದೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.
ಅಸ್ಮಾ ಶಫೀಕ್ ಅವರು ಈಗ ಪಶ್ಚಿಮ ಉಕ್ರೇನ್‍ಗೆ ಹೋಗುತ್ತಿದ್ದಾರೆ. ಅಲ್ಲಿಂದ ಶೀಘ್ರದಲ್ಲೇ ಅವರು ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬದವರನ್ನು ಸೇರಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
