ಬೆಂಗಳೂರು, ಮಾ.4- ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ತೀವ್ರಗೊಂಡಿದ್ದು, ನಿನ್ನೆ ಒಂದೇ ದಿನ 104 ಮಂದಿ ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ. ಫೆ.27 ರಿಂದ ನಿನ್ನೆ ಮಧ್ಯರಾತ್ರಿವರೆಗೆ ರಾಜ್ಯಕ್ಕೆ 190 ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಹಾಗೂ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನ್‍ನಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಿಮಾನಗಳ ಮೂಲಕ ಕರೆತರುತ್ತಿದ್ದು, ನಿನ್ನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಮರಳುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇದೆ.
ಕಳೆದ ಫೆ.27ರಿಂದಲೂ ವಿದ್ಯಾರ್ಥಿಗಳು ಪ್ರತಿದಿನವೂ ಮರಳುತ್ತಿದ್ದಾರೆ. ಫೆ.27ರಂದು 30, 28ರಂದು 7, ಮಾರ್ಚ್ 1ರಂದು 18, ಮಾರ್ಚ್ 2ರಂದು 31 ಹಾಗೂ ನಿನ್ನೆ ಅತಿಹೆಚ್ಚು 104 ಮಂದಿ ಮರಳಿದ್ದಾರೆ. ದೆಹಲಿ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ ಎಂದು ಅವರು ಹೇಳಿದರು.
ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ನೆರವಿಗೆ ದಾವಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ರಾಯಭಾರಿ ಕಚೇರಿ ನೀಡುವ ನಿರ್ದೇಶನ, ಸಲಹೆಗಳನ್ನು ಪಾಲಿಸಲು ಸಂಕಷ್ಟದಲ್ಲಿ ಸಿಲುಕಿರುವವರಿಗೆ ತಿಳಿಸಲಾಗಿದೆ.
ಸ್ಥಳಾಂತರಗೊಳ್ಳುವವರೆಗೂ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆಯೂ ಮನವಿ ಮಾಡಲಾಗಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಕೆಎಸ್ಆರ್‌ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.
