ಕ್ಯಿವ್,ಮಾ.6-ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ಅಸುರಕ್ಷಿತ ತಾಣವಾಗಿದ್ದು, ಒಂದೂವರೆ ಕೋಟಿ ಜನ ದೇಶ ತೊರೆದಿದ್ದು, ನೆರೆಯ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿದ್ದಾರೆ. ರಷ್ಯಾ ಫೆ.24ರಿಂದ ಯುದ್ಧ ಘೋಷಣೆ ಮಾಡಿ ನಿರಂತರವಾಗಿ ಆಕ್ರಮಣ ನಡೆಸುತ್ತಿದೆ. ಶೆಲ್, ಬಾಂಬ್ ದಾಳಿಗಳು, ಗುಂಡು ಹಾರಾಟಗಳು ಸಾಮಾನ್ಯವಾಗಿದೆ.
ಕಪ್ಪು ಸಮುದ್ರ ಭಾಗದ ಕೆರೋಸಿನ್ ನಗರ ಮತ್ತು ಪಶ್ಚಿಮ ಗಡಿಯ ಸಮುದ್ರ ಭಾಗ ರಷ್ಯಾದ ಹಿಡಿತದಲ್ಲಿದೆ. ಅಲ್ಲಿಂದ ಯುದ್ಧ ಸಲಕರಣೆಗಳನ್ನು ಮರಿಯಪೋಲು ಸೇರಿದಂತೆ ಇತರ ನಗರಗಳಿಗೆ ಸರಬರಾಜು ಮಾಡಿಕೊಂಡು ದಾಳಿ ಮುಂದುವರೆಸಿದೆ. ರಾಷ್ಟ್ರದ ರಾಜಧಾನಿ ಕ್ಯಿವ್‍ನಲ್ಲಿ ಸಾವುನೋವುಗಳು ಹೆಚ್ಚಾಗಿವೆ. ಖಾರ್ಕೀವ್ ಸೇರಿದಂತೆ ಬಹಳಷ್ಟು ನಗರಗಳು ಸಂಕಷ್ಟಕ್ಕೆ ಸಿಲುಕಿವೆ. ಖಾರ್ಕೀವ್, ಒಡೆಸ್ಸಾ, ಡೊಂಟೆಸ್ಕ್, ಎಲ್ವಿವ್ , ಮೈಕೋಲೈವ್, ಚರ್ನೀವ್, ಸುಮಿ ಸೇರಿದಂತೆ ಹಲವು ನಗರಗಳು ದಾಳಿಗೆ ತುತ್ತಾಗಿವೆ.
ಸುಮಾರು 76 ನಗರಗಳ ಪೈಕಿ ಬಹುತೇಕ ಭೂಭಾಗದ ಮೇಲೆ ರಷ್ಯಾ ಮುಗಿಬಿದ್ದಿದೆ. ದಿನೇ ದಿನೇ ಯುದ್ಧಪೀಡಿತ ವಾತಾವರಣ ತೀವ್ರಗೊಳ್ಳುತ್ತಿದೆ. ಉಕ್ರೇನ್ ಸೈನಿಕರು ಕೂಡ ದಿಟ್ಟ ಹೋರಾಟ ನಡೆಸುತ್ತಿದ್ದಾರೆ. 12 ದಿನಗಳ ಯುದ್ಧದಲ್ಲಿ ಎರಡು ಬಾರಿ ಲಘು ಕದನ ವಿರಾಮ ನೀಡಲಾಗಿತ್ತು. ಉಳಿದಂತೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದರಿಂದ ಭಯಭೀತರಾದ ಜನ ಪ್ರಾಣ ರಕ್ಷಣೆಗಾಗಿ ಬಂಕರ್‍ಗಳಲ್ಲಿ ಅಡಗಿ ಕುಳಿತಿದ್ದಾರೆ. ಅಪಾರ್ಟ್‍ಮೆಂಟ್‍ಗಳು, ಮನೆಗಳು ಶೆಲ್ ದಾಳಿಯಿಂದ ಧ್ವಂಸಗೊಂಡಿವೆ.
ಭೂ ಮೇಲ್ಭಾಗದಲ್ಲಿ ಬದುಕುವುದೇ ಕಷ್ಟ ಎಂಬ ಭೀತಿ ಉಂಟಾಗುತ್ತಿದೆ. ರಷ್ಯಾ ನೀರು, ವಿದ್ಯುತ್ ಸೌಲಭ್ಯಗಳನ್ನು ಕಡಿತ ಮಾಡುತ್ತಿದೆ. ಬಹುತೇಕ ನಗರೀಕರಣ ಮತ್ತು ಆಧುನೀಕರಣದಿಂದ ಸುಭಿಕ್ಷವಾಗಿದ್ದ ಉಕ್ರೇನ್ ಯುದ್ಧದಿಂದ ನಲುಗಿ ಹೋಗಿದೆ. ಜನ ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗುತ್ತಿದ್ದಾರೆ.
ಬಸ್, ರೈಲು, ಕಾರು ಕೊನೆಗೆ ನಡೆದು ಕೂಡ ದೇಶ ತೊರೆಯುತ್ತಿದ್ದಾರೆ. ಈವರೆಗೂ 14.5 ಮಿಲಿಯನ್( ಒಂದೂವರೆ ಕೋಟಿ ಜನ ದೇಶ ಭ್ರಷ್ಟರಾಗಿದ್ದಾರೆ. ಇದರ ಪೈಕಿ ಪೋಲೆಂಡ್‍ಗೆ 7.87 ಮಿಲಿಯನ್ ಬೋಲ್ಡಾವಾಕ್ಕೆ, 2.28 ಮಿಲಿಯನ್ ಹಂಗೇರಿಗೆ, 1.44 ಮಿಲಿಯನ್ ರೊಮಾನಿಯಾಗೆ 1.32 ಮಿಲಿಯನ್ ಸ್ಲೊವಾಕಿಯಾಗದೆ ಒಂದು ಮಿಲಿಯನ್ ಜನ ವಲಸೆ ಹೋಗಿದ್ದಾರೆ. ಉಕ್ರೇನ್ 4.41 ಕೋಟಿ ಜನಸಂಖ್ಯೆ ಹೊಂದಿದ್ದ ಅದರಲ್ಲಿ ಬಹುತೇಕ ಜನ ವಲಸೆ ಹೋಗುವ ನಿರೀಕ್ಷೆಯಿದೆ.
