ಸ್ಟಾರ್ಟಪ್‍ಗಳಿಂದ ದೇಶದ ಸಂಪತ್ತು, ಮೌಲ್ಯ ವೃದ್ಧಿಸೈಡ್ : PM ಮೋದಿ

ನವದೆಹಲಿ, ಮೇ 29- ದೇಶದಲ್ಲಿ ಯೂನಿಕಾರ್ನ್‍ಗಳ ಸಂಖ್ಯೆ ನೂರರ ಗಡಿ ದಾಟಿದ್ದು, ಕೊರೊನಾ ಎರಡನೆ ಹಂತದ ಸಾಂಕ್ರಾಮಿಕ ಕಾಲದಲ್ಲೂ ಭಾರತದ ಸ್ಟಾರ್ಟಪ್ ಸಂಸ್ಥೆಗಳು ಸಂಪತ್ತು ಮತ್ತು ಮೌಲ್ಯ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮನ್ ಕೀ ಬಾತ್‍ನಲ್ಲಿ ಮಾತ ನಾಡಿದ ಅವರು, ನೂರರ ಗಡಿ ದಾಟಿರುವ ಯೂನಿಕಾರ್ನ್‍ನ ಒಟ್ಟಾರೆ ಮೌಲ್ಯ 25 ಲಕ್ಷ ಕೋಟಿ ರೂ.ಗಳಾಗಿದ್ದು, ಇಂತಹ ಗುರಿ ಸಾಧನೆ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ ಎಂದರು. ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಭಾರತದ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲೂ ವಾಣಿಜ್ಯೋದ್ಯಮಿಗಳು ಹೆಚ್ಚಾಗುತ್ತಿದ್ದು, ದೇಶದ ಸಂಪತ್ತು ಮತ್ತು ಮೌಲ್ಯ ವೃದ್ಧಿಯಾಗಿದೆ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಕೇವಲ 44 ಯೂನಿಕಾರ್ನ್ ಇದ್ದವು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 14 ಹೊಸ ಯೂನಿಕಾರ್ನ್‍ಗಳನ್ನು ಸ್ಥಾಪಿಸಲಾಗಿತ್ತು. ಇಂತಹ ಕೊರೊನಾ ಮಹಾಮಾರಿ ಸಂದರ್ಭದಲ್ಲೂ ದೇಶದಲ್ಲಿ ಹೊಸ ಸ್ಟಾರ್ಟಪ್ ಸಂಸ್ಥೆಗಳು ಹುಟ್ಟಿಕೊಂಡಿರುವುದು ಶ್ಲಾಘನೀಯ ಎಂದು ಮೋದಿ ಬಣ್ಣಿಸಿದರು.

ಅಮೆರಿಕ, ಇಂಗ್ಲೆಂಡ್ ಮತ್ತಿತರ ಮುಂದುವರೆದ ರಾಷ್ಟ್ರಗಳಿಗಿಂತಲೂ ವಾರ್ಷಿಕ ಬೆಳವಣಿಗೆಯಲ್ಲಿ ಭಾರತೀಯ ಯೂನಿಕಾರ್ನ್‍ಗಳು ಮುಂದಿರುವುದು ನಮ್ಮ ದೇಶದ ಸಾಧನೆಯಾಗಿದೆ. ಇದು ಕೇವಲ ಯೂನಿಕಾನ್ರ್ಸ್‍ಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇ-ಕಾಮರ್ಸ್, ಫಿನ್-ಟೆಕ್, ಎಡ್-ಟೆಕ್ ಹಾಗೂ ಬಯೋಟೆಕ್ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಲಾಗಿದೆ.

ನಮ್ಮ ದೇಶದ ಸಾಧನೆ ಇಡೀ ವಿಶ್ವದ ಪ್ರತಿಬಿಂಬವಾಗಿದ್ದು, ನಮ್ಮ ಈ ಸಾಧನೆ ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿರದೆ ಸಣ್ಣಪುಟ್ಟ ನಗರಗಳಿಗೂ ಹಬ್ಬಿರುವುದು ಭಾರತೀಯರ ವೈವಿಧ್ಯತೆಗೆ ಸಾಕ್ಷಿಯಾಗಿದೆ.

ಒಬ್ಬ ಒಳ್ಳೆ ಮೆಂಟರ್‍ನಿಂದ ಮಾತ್ರ ಒಂದು ಉತ್ತಮ ಸಂಸ್ಥೆ ಸ್ಥಾಪಿಸಲು ಸಾಧ್ಯ. ಈ ರೀತಿಯ ಹೊಸ ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ನಮ್ಮಲ್ಲಿ ಅತ್ಯುತ್ತಮ ನೂರಾರು ಮೆಂಟರ್‍ಗಳಿರುವುದರಿಂದ ನೂರಾರು ಸ್ಟಾರ್ಟಪ್‍ಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ಮೋದಿ ಶ್ಲಾಘಿಸಿದರು.
ನಮ್ಮ ಈ ಸಾಧನೆ ಇಡೀ ವಿಶ್ವದ ಗಮನ ಸೆಳೆದಿದ್ದು, ಭವಿಷ್ಯದಲ್ಲಿ ಭಾರತ ಇಡೀ ಪ್ರಪಂಚಕ್ಕೇ ಮಾರ್ಗದರ್ಶಕವಾಗುವ ಮುನ್ಸೂಚನೆ ಎಂದು ಅವರು ಬಣ್ಣಿಸಿದರು.

ವೈವಿಧ್ಯತೆಯ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ನೂರಾರು ಭಾಷೆಗಳು, ಲಿಪಿಗಳಿವೆ. ಆದರೂ ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಾಗಿ ಜೀವನ ಸಾಗಿಸುತ್ತಿರುವುದರಿಂದ ಉನ್ನತಿ ಸಾಸಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಉತ್ತರಖಂಡದಿಂದ ಮೈಸೂರಿಗೆ ಬಂದ ಕ್ಷಯರೋಗಿ ಕಲ್ಪನಾ ಅವರು ಕೇವಲ ಮೂರು ತಿಂಗಳಲ್ಲೇ ಕನ್ನಡ ಭಾಷೆ ಕಲಿಯುವುದಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 92 ಅಂಕ ಪಡೆದಿರುವುದನ್ನು ಮೋದಿ ಅವರು ಉಲ್ಲೇಖಿಸಿದರು.
ಮಾತ್ರವಲ್ಲ, ಸಂತಾಲಿ ಸಮುದಾಯದ ಸಂವಿಧಾನ ರಚಿಸಿರುವ ಪಶ್ಚಿಮ ಬಂಗಾಳದ ಪುರುಲಿಯಾ ಗ್ರಾಮದ ಶ್ರೀಪಾಟಿ ತುಡು ಅವರನ್ನು ಮೋದಿ ಅವರು ಸ್ಮರಿಸಿಕೊಂಡರು.

ಈ ಎರಡು ಜೀವಂತ ಉದಾಹರಣೆಗಳು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಬಣ್ಣಿಸಿದರು.
ಜೂ.21ರಂದು ಇಡೀ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಯೋಗ ಎನ್ನುವುದು ಮಾನವೀಯತೆಯ ಸಂಕೇತ. ಹೀಗಾಗಿ ವಿಶ್ವದಲ್ಲಿರುವ ಪ್ರತಿಯೊಬ್ಬರೂ ಯೋಗದ ಬಗ್ಗೆ ತಿಳಿದುಕೊಂಡು ತಮ್ಮ ಜೀವನವನ್ನು ಉತ್ತಮ ಪಥದತ್ತ ಸಾಗಿಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಇಡೀ ವಿಶ್ವದಾದ್ಯಂತ ಲಸಿಕೆ ಹಾಕಿರುವುದರಿಂದ ನಾವಿಂದು ಕೊರೊನಾ ಮುಕ್ತರಾಗಿದ್ದೇವೆ. ಆದರೂ ಮಹಾಮಾರಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು ಎಂದು ಮೋದಿ ಅವರು ಮನವಿ ಮಾಡಿಕೊಂಡರು. ಕೊರೊನಾ ಸಾಂಕ್ರಾಮಿಕ ರೋಗ ಮನುಷ್ಯನ ಜೀವಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.