ಬೆಂಗಳೂರು,ಫೆ.4- ಪಿಯು ಕಾಲೇಜುಗ ಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಬಿಸಿ-ಬಿಸಿ ಚರ್ಚೆಗೆ ಕಾರಣ ವಾಗಿದೆ. ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಕರ್ನಾಟಕ ಸರ್ಕಾರ ಪಿಯುಸಿ ಕಾಲೇಜುಗಳಲ್ಲಿ ಸಮವಸ್ತ್ರ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ನ ಅರ್ಜಿ ವಿಚಾರಣೆಗೆಗಾಗಿ ಕಾಯಲಾಗುತ್ತಿದೆ.
ಕರ್ನಾಟಕ ಹೈಕೋರ್ಟ್ ನೀಡುವ ಆದೇಶದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಜಾರಿಗೊಳಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಈ ಮೂಲಕ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಶೇ.75ರಷ್ಟು ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಈಗಾಗಲೇ ಜಾರಿಯಲ್ಲಿದೆ. ಎಸ್ಡಿಎಂಸಿ ಸಮಿತಿಯಗಳು ಅವುಗಳ ಕುರಿತು ತೀರ್ಮಾನ ಮಾಡುತ್ತಿವೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಇವುಗಳನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಚೂಡಿಧಾರ, ದುಪ್ಪಟ್ಟ ಮತ್ತು ವಿದ್ಯಾರ್ಥಿಗಳಿಗೆ ಫಾರ್ಮಲ್ ಪ್ಯಾಂಟ್ ಮತ್ತು ಶರ್ಟ್ ಅನ್ನು ಸಮವಸ್ತ್ರವಾಗಿ ಮಾಡಲಾಗುತ್ತದೆ.
ಈ ಕುರಿತು ಸಮಿತಿ ರಚನೆ ಮಾಡಿ ಅದರ ಶಿಫಾರಸು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುತ್ತದೆ. ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಮಾತನಾಡಿದ್ದು, ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಜಾರಿಗೊಳಿಸಲು ನಾವು ಚಿಂತನೆ ನಡೆಸಿದ್ದೇವೆ. ಸಮತಿ ರಚನೆ ಮಾಡಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಉಡುಪಿಯ ಹಿಜಾಬ್ ವಿವಾದ ತೀವ್ರ ಸ್ವರೂಪವನ್ನು ಪಡೆದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಈಗ ಉಡುಪಿಯ ಮೂರು ಕಾಲೇಜುಗಳಿಗೆ ಈ ವಿವಾದ ಹಬ್ಬಿದೆ. ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಸಹ ದೊಡ್ಡ ಸುದ್ದಿಯಾಗಿದೆ.
ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲೇ ತಡೆದು ಹೊರಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲು ಉಡುಪಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ಆದೇಶದ ಪ್ರಕಾರ ಹಿಜಾಬ್ ಅಥವಾ ಕೇಸರಿ ಶಲ್ಯ ಧರಿಸಿ ಕಾಲೇಜು ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ.
ಹಿಜಾಬ್ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉಡುಪಿ ಜಿಲ್ಲಾಡಳಿತದ ಅಕಾರಿಗಳೊಂದಿಗೆ ಸಭೆ ನಡೆಸಿದರು. ಸರ್ಕಾರ ಈಗ ಸಮವಸ್ತ್ರ ಜಾರಿಗೊಳಿಸುವ ಮೂಲಕ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದೆ.
ಪೊಲೀಸರಿಗೆ ಸೂಚನೆ; ಇನ್ನು ವಿವಾದದ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಹೊರತುಪಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಧರಿಸಬಾರದು ಎಂದು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವವಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯವೇ ಹೊರತು ಬೇರೇನೂ ಅಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿವಾದದ ಹಿಂದೆ ಮತೀಯ ಸಂಘಟನೆಗಳ ಕೈವಾಡ ಇರಬಹುದು. ಈ ಬಗ್ಗೆ ಗಮನ ಹರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಯಾರು ಏಕತೆಗೆ ಅಡ್ಡಗಾಲು ಹಾಕುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
