ಬೆಂಗಳೂರು,ಫೆ.9- ನ್ಯಾಯಾಲಯದ ತೀರ್ಪು ಬರುವವರೆಗೂ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಸಮವಸ್ತ್ರ ನೀತಿಯನ್ನು ಪಾಲನೆ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರು ಹಿಜಾಬ್ ಬೇಕು ಎನ್ನುತ್ತಾರೆ. ಮತ್ತೊಬ್ಬರು ಕೇಸರಿ ಶಾಲು ಬೇಕು ಎನ್ನುತ್ತಾರೆ. ಅವರವರ ಇಷ್ಟಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳಲ್ಲಿ ಉಡುಪು ತೊಡಲು ಅವಕಾಶವಿಲ್ಲ. ಆಡಳಿತ ಮಂಡಳಿ ಏನು ನಿರ್ಧರಿಸುತ್ತದೆಯೋ ಅದನ್ನು ಪಾಲನೆ ಮಾಡಲೇಬೇಕೆಂದು ಹೇಳಿದರು.
ವಿದ್ಯಾರ್ಥಿಗಳ ನಡುವೆ ಅಸಮಾನತೆ ಉಂಟಾಗದಂತೆ ಪ್ರತಿಯೊಬ್ಬರಲ್ಲೂ ಸಮಾನತೆ ಬೆಳೆಯಬೇಕು ಎಂಬ ಕಾರಣಕ್ಕಾಗಿ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ. ನಾಲ್ಕು ದಿನಗಳ ಹಿಂದೆ ರಾಜ್ಯ ಸರ್ಕಾರ ಹೊರಡಿಸಿರುವ ಸಮವಸ್ತ್ರ ನೀತಿಯನ್ನು ಎಲ್ಲರೂ ಪಾಲನೆ ಮಾಡಬೇಕು. ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಲ್ಲ ಎಂದರು.
ಕೆಲವರು ಹಿಜಾಬ್ ಜತೆಗೆ ಶಿಕ್ಷಣ ಮುಖ್ಯ ಎನ್ನುತ್ತಾರೆ. ಅದೇ ರೀತಿ ಇನ್ನು ಕೆಲವರು ಕೇಸರಿ ಜತೆಗೆ ನಮಗೂ ಕೂಡ ಶಿಕ್ಷಣ ಮುಖ್ಯ ಎನ್ನುತ್ತಾರೆ. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದ್ದು, ನಾವು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ವಿದ್ಯಾರ್ಥಿಗಳಲ್ಲಿ ಮೇಲು, ಕೀಳು, ಜಾತಿ, ಧರ್ಮ ಬರಲೇಬಾರದು. ಶಿಕ್ಷಣ ಕಲಿತು ಉನ್ನತ ಸ್ಥಾನಕ್ಕೆ ಏರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಈಗ ನಡೆಯುತ್ತಿರುವ ಘಟನೆಯನ್ನು ಅವಲೋಕಿಸಿದರೆ ಇದರಲ್ಲಿ ದುಷ್ಟಶಕ್ತಿಗಳ ಕೈವಾಡವಿದೆ. ಕಾಣದ ಸಂಘಟನೆಗಳು ಕುಳಿತಲ್ಲೇ ಗಲಭೆಗೆ ಪ್ರಚೋದನೆ ನೀಡುತ್ತವೆ. ಯಾವುದೇ ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗದೆ ನಿಮ್ಮ ನಿಮ್ಮ ಪೋಷಕರ ಅಪೇಕ್ಷೆಯಂತೆ ಉತ್ತಮ ಶಿಕ್ಷಣ ಕಲಿತು ಮುಂದೆ ಬನ್ನಿ ಎಂದು ಮನವಿ ಮಾಡಿದರು.
ಯಾರೂ ಕೂಡ ಇಂತಹ ಸಮಯದಲ್ಲಿ ಪ್ರಚೋದನೆ ನೀಡಬಾರದು. ವಿದ್ಯಾರ್ಥಿಗಳು ಶಾಂತ ರೀತಿಯಿಂದ ವರ್ತಿಸಬೇಕು. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಘಟನೆಗಳು ಯಾರಿಗೂ ಶೋಭೆ ತರುವುದಿಲ್ಲ ಎಂದರು. ಪರಿಸ್ಥಿತಿಗೆ ಅನುಗುಣವಾಗಿ ಶಾಲಾ-ಕಾಲೇಜುಗಳನ್ನು ತೆರೆಯುವಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪರಿಸ್ಥಿತಿ ತಿಳಿಯಾಗುತ್ತಿದೆ. ಯಾರೂ ಕೂಡ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ನಾಗೇಶ್ ಹೇಳಿದರು.
