ನವದೆಹಲಿ,ಫೆ.1- ನವ ಭಾರತ ನಿರ್ಮಾಣಕ್ಕೆ ಅಮೃತ್‍ಕಾಲ್ ಯೋಜನೆ ಘೋಷಣೆ, ಪ್ರಸಕ್ತ ವರ್ಷದಿಂದಲೇ 5ಜಿ ತರಂಗಾಂತರ ಹರಾಜು, ಐದು ಅಂತಾರಾಜ್ಯ ನದಿಗಳ ಜೋಡಣೆ, ಗತಿಶಕ್ತಿ ಯೋಜನೆಗೆ ವೇಗ, ಒಂದು ನಿಲ್ದಾಣ ಒಂದು ಉತ್ಪನ್ನ ಸೇರಿದಂತೆ ರೈಲ್ವೆ ಇಲಾಖೆಯಲ್ಲಿ 400 ಒಂದೇ ಭಾರತ್ ರೈಲುಗಳಿಗೆ ಚಾಲನೆ, ಆತ್ಮನಿರ್ಭರ್ ಭಾರತ್ ಅಡಿ 60 ಲಕ್ಷ ಉದ್ಯೊಗ ಸೃಷ್ಟಿ ಸೇರಿದಂತೆ ಹಲವು ಮಹತ್ವದ ಘೊಷಣೆಗಳ ಕೇಂದ್ರ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ಸತತವಾಗಿ ನಾಲ್ಕನೇ ಬಾರಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಸಂಕಷ್ಟ ಆರ್ಥಿಕ ಹಿಂಜರಿತದ ನಡುವೆಯೂ ಕೂಡ ಜನಪ್ರಿಯ ಘೋಷಣೆಗಳ ಜನಹಿತ ಬಜೆಟ್ ಮಂಡಿಸಿ ಆಡಳಿತ ಪಕ್ಷದ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.2022-23ನೇ ಸಾಲಿನ ಬಜೆಟ್‍ನಲ್ಲಿ ಹಲವು ಖಾಸಗೀಕರಣ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರಕ್ಷಣೆ, ಕೃಷಿ, ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಆತ್ಮನಿರ್ಭರ್ ಭಾರತ್ ಅಡಿ ಕಳೆದ ವರ್ಷ ರಕ್ಷಣಾ ಕ್ಷೇತ್ರ ಶೇ.68ರಷ್ಟು ದೇಶೀಯ ಬಂಡವಾಳ ಪಡೆದುಕೊಂಡಿದೆ. ಅದರ ಹಿಂದಿನ ವರ್ಷ ಶೇ.58ರಷ್ಟಿತ್ತು. ರಕ್ಷಣಾ ಕ್ಷೇತ್ರದ ಸಂಶೋಧನೆ ಮತ್ತು ಅನ್ವೇಷಣೆಗಳು ನವೋದ್ಯಮಗಳಿಗೆ ಮುಕ್ತವಾಗಿದ್ದವು. ಶೇ.25ರಷ್ಟು ಶೈಕ್ಷಣಿಕ ಮಟ್ಟಕ್ಕೆ ಮೀಸಲಿರಿಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 25ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸೌರಶಕ್ತಿ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದ್ದು, ಉತ್ಕøಷ್ಟ ದರ್ಜೆಯ ಪಿವಿ ಮಾಡ್ಯೂಲರ್‍ಗಳನ್ನು ತಯಾರಿಸಲು 19,500 ಕೋಟಿ ರೂ.ಗಳನ್ನು ಪಿಎಲ್‍ಐ ಯೋಜನೆಯಡಿ ಹೆಚ್ಚುವರಿ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ದೇಶದ ಸಂಪರ್ಕ ಸೇವೆ ತನ್ನ ಮೊಗ್ಗಲು ಬದಲಿಸಲಿದ್ದು, ಇದೇ ವರ್ಷ 5ಜಿ ತರಂಗಾಂತರಗಳನ್ನು ಹರಾಜು ಹಾಕಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.ಡಿಆರ್‍ಡಿಒ ಇತರ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆಗಳಿಗೆ ಮುಂದಾಗಲಿದೆ ಎಂದು ಅವರು ಹೇಳಿದರು.ಕೆನ್‍ಡೆತ್ವಾಲ್ ಸಂಪರ್ಕ ಯೋಜನೆ ಅನುಷ್ಠಾನಕ್ಕಾಗಿ 44,605 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರ ಅಡಿ 9ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸಲಾಗಿವುದು, 62 ಲಕ್ಷ ಮಂದಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ.
103 ಮೆಗಾವ್ಯಾಟ್ ಜಲವಿದ್ಯುತ್, 27 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯಾಗಲಿದೆ. 2022-23ನೇ ಸಾಲಿಗೆ 1400 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದರು.ಡಿಜಿಟಲ್ ಆರ್ಥಿಕತೆಗೆ ವಿಫಲ ಅವಕಾಶಗಳಿವೆ. ವಿಳಂಬ ಪಾವತಿಯನ್ನು ಕಡಿಮೆ ಮಾಡಲು ಕೇಂದ್ರದ ಎಲ್ಲಾ ಸಚಿವಾಲಯಗಳಲ್ಲಿ ಆನ್‍ಲೈನ್ ಬಿಲ್‍ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
