ಬಿಡದಿ,ಜ.31- ನಾಳೆ ಮಂಡನೆಯಾಗಲಿರುವ ಕೇಂದ್ರ ಬಜೆಟ್‍ನಿಂದ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಏನೇನಾಗಿದೆ ಎಂಬುದು ಅರಿವಿರುವುದರಿಂದ ಬಜೆಟ್‍ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಕ್ಷೇತ್ರದಲ್ಲಿ ಏರಿಕೆಯಾಗಿದೆ, ಯಾವ ಕ್ಷೇತ್ರದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿ ಅವರ ಸಾಧನೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು. ಜೆಡಿಎಸ್‍ನ್ನು ಛಿದ್ರ ಮಾಡುವುದು ಅಷ್ಟು ಸುಲಭವಲ್ಲ ಎಂದು ಸಂಸದ ಡಿ.ಕೆ.ಸುರೇಶ್‍ವ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಸದರಾಗಿ ರಾಮನಗರ, ಮಾಗಡಿ, ಚನ್ನಪಟ್ಟಣ ತಾಲ್ಲೂಕುಗಳಿಗೆ ನೀಡಿರುವ ಕೊಡುಗೆ ಏನು ಎಂದು ಹೇಳಬೇಕು ಎಂದು ಆಗ್ರಹಿಸಿದರು.
ತಾವು ಗುತ್ತಿಗೆದಾರರಿಂದ ಕಮೀಷನ್ ಪಡೆದು ಕಾಮಗಾರಿ ಮಾಡಿ ಎಂದು ಹೇಳುತ್ತಿಲ್ಲ. ಕನಕಪುರ ತಾಲ್ಲೂಕಿನ ದೊಡ್ಡ ಹಾಲಹಳ್ಳಿಯಲ್ಲಿ ಆರು ಕೋಟಿ ರೂ. ಕಾಮಗಾರಿ ಏನಾನಾಗಿದೆ ಎಂಬುದು ಗೊತ್ತಿದೆ. ನರೇಗಾ ಹೆಸರಿನಲ್ಲಿ ಲೂಟಿ ಮಾಡಿರುವುದನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಮಾಹಿತಿಯನ್ನು ವಿಧಾನಸಭೆಯಲ್ಲೇ ಪ್ರಸ್ತಾಪಿಸಲಾಗುವುದು. ವಿಧಾನಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಕೂರಲು ಕಾಂಗ್ರೆಸ್ ಬಿಡಲಿಲ್ಲ.
ಚಿತಾಗಾರದ ಮುಂದೆ ಫೋಟೋ ತೆಗೆಸಿಕೊಂಡಿರುವ ಸಂಸದರು ಯಾವ ರೀತಿ ಜನ ಸೇವೆ ಮಾಡುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಹೆಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ಜಾರಿ ಬಂದದ್ದು ಗ್ರಾಮ ಸಡಕ್ ಯೋಜನೆ, ಶಾನುಮಂಗಲ, ಕೈಲಂಚ, ಶಾನುಭೋಗನಹಳ್ಳಿ ಬಳಿ ಸೇತುವೆ ನಿರ್ಮಾಣ ಮಾಡಿದ್ದು, ಐದು ವರ್ಷ ಆಡಳಿತದಲ್ಲಿದ್ದು, ರಾಮನಗರಕ್ಕೆ ಏಕೆ ಆರೋಗ್ಯ ವಿವಿ ತರಲಿಲ್ಲ ಎಂದು ಪ್ರಶ್ನಿಸಿದರು.
