ನವದೆಹಲಿ, ಸೆ.19- ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಹೊಸ ಸಂಸತ್ ಭವನದ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮತದಾರರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ವಿರೋಧ ಪಕ್ಷಗಳಿಗೆ ಭರ್ಜರಿ ಟಕ್ಕರ್ ಕೊಟ್ಟಿದ್ದಾರೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್ ಮಾಡಿ, ಮಹಿಳಾ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನೈತಿಕ ಧೈರ್ಯ ಮೋದಿ ಸರ್ಕಾರಕ್ಕೆ ಮಾತ್ರ ಇದೆ. ಇದು ಸಂಪುಟದ ಅನುಮೋದನೆಯೊಂದಿಗೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ದಶಕಗಳಿಂದ ಒಂದಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಸ್ತುತ ನಡೆಯುತ್ತಿರುವ 5 ದಿನಗಳ ವಿಶೇಷ ಅಧಿವೇಶನದಲ್ಲಿ ಮಂಡಿಸಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಒಮ್ಮತದಿಂದ ಅಂಗೀಕರಿಸಿ ನಂತರ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳಿಸಿಕೊಡಲಾಗುತ್ತಿದೆ. ಮಸೂದೆಯು ಕಾಯಿದೆಯಾಗಿ ಜಾರಿಗೆ ಬಂದ ನಂತರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡಬೇಕು. ಪ್ರತಿ ರಾಜಕೀಯ ಪಕ್ಷವು ತನ್ನ ಟಿಕೆಟ್‍ಗಳ ಶೇ 20ರಷ್ಟನ್ನು ಮಹಿಳೆಯರಿಗೆ ಹಂಚಬೇಕು.
ಮೀಸಲಾತಿ ಶೇ.20 ಸೀಟುಗಳನ್ನು ಮೀರಬಾರದು. ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಮಹಿಳೆಯರಿಗೆ ಕೋಟಾ ಇರಬೇಕು.ಅಲ್ಲದೆ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ನೀಡಬೇಕು.ಶೇ.33ರಷ್ಟು ಮೀಸಲಾತಿ ಅನುಷ್ಠಾನಕ್ಕೆ ಬಂದರೆ ಲೋಕಸಭೆಯಲ್ಲಿ 180 ಸ್ಥಾನ ಹಾಗೂ ರಾಜ್ಯಸಭೆಯ 250 ಸ್ಥಾನಗಳಲ್ಲಿ 82 ಸ್ಥಾನಗಳನ್ನು ಮಹಿಳೆಯರು ಆಲಂಕರಿಸಲಿದ್ದಾರೆ.
ಏನಿದು ಮಹಿಳಾ ಮೀಸಲಾತಿ: ಹಾಲಿ ಸಂಸತ್‍ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.14ರಷ್ಟಿದೆ. ಸಾಕಷ್ಟು ವರ್ಷಗಳಿಂದ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. 1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಈ ಮಸೂದೆ ಮಂಡನೆಯಾಗಿತ್ತು. ಆದರೆ ಸಂಸತ್ನಲ್ಲಿ ಇದುವರೆಗೂ ಈ ಮಸೂದೆ ಅಂಗೀಕಾರವಾಗಿಲ್ಲ.
ಹಾಲಿ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.14ರಷ್ಟಿದೆ. ಹೀಗಾಗಿ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡಬೇಕು ಎಂಬುದು ಈ ಮಸೂದೆ ಉದ್ದೇಶವಾಗಿದೆ. ಈ ಮಹಿಳಾ ಮೀಸಲಾತಿ ಮಸೂದೆಗೆ ಸಾಕಷ್ಟು ವರ್ಷಗಳಿಂದ ಬೇಡಿಕೆ ಇತ್ತು.
ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿತ್ತು.
ಮಹಿಳಾ ಸಂಸದರು ಲೋಕಸಭೆಯಲ್ಲಿ ಶೇ.15ಕ್ಕಿಂತ ಕಡಿಮೆ ಸ್ಥಾನ ಹೊಂದಿದ್ದಾರೆ. ಅವರ ಪ್ರಾತಿನಿಧ್ಯವು ಅನೇಕ ರಾಜ್ಯ ವಿಧಾನಸಭೆಗಳಲ್ಲಿ ಶೇ.10ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ, ಕಳೆದ 27 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ನಡೆಯುತ್ತಲೇ ಇದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಮೀಸಲಿಡುವ ಕ್ರಮಕ್ಕೆ ಸಾಕಷ್ಟು ಗದ್ದಲವೂ ನಡೆದಿತ್ತು. ಇದರ ಪರಿಣಾಮ, ರಾಜ್ಯಸಭೆ 2010ರಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಲೋಕಸಭೆಯ ಒಪ್ಪಿಗೆ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ.
ಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ಅನರ್ಹ ಆದೇಶಕ್ಕೆ ಸುಪ್ರೀಂ ತಡೆ
ಪ್ರಸ್ತುತ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಇದು ಶೇ.15ಕ್ಕಿಂತ ಕಡಿಮೆ. ರಾಜ್ಯಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ಶೇ.14ರಷ್ಟಿದೆ ಎಂದು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‍ನಲ್ಲಿ ಸಂಸತ್ತಿಗೆ ಅಂಕಿ-ಅಂಶಗಳು ನೀಡಿದೆ. ಹಲವಾರು ರಾಜ್ಯಗಳ ವಿಧಾನಸಭೆಗಳು ಶೇ.10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಪುದುಚೇರಿ ಈ ಪಟ್ಟಿಯಲ್ಲಿವೆ.ಡಿಸೆಂಬರ್ 2022ರ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಶೇ.10-12 ರಷ್ಟು ಮಹಿಳಾ ಶಾಸಕರಿದ್ದಾರೆ.
ಛತ್ತೀಸ್‍ಗಢ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‍ಗಳು ಕ್ರಮವಾಗಿ ಶೇ.14.44, ಶೇ.13.7 ಮತ್ತು ಶೇ.12.35 ಮಹಿಳಾ ಶಾಸಕರೊಂದಿಗೆ ಅಗ್ರಸ್ಥಾನದಲ್ಲಿವೆ. ಕಳೆದ ಕೆಲವು ವಾರಗಳಲ್ಲಿ, ಬಿಜೆಡಿ ಮತ್ತು ಬಿಆರ್‍ಎಸ್ ಸೇರಿದಂತೆ ಹಲವು ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಪುನರುಜ್ಜೀವನಗೊಳಿಸಲು ಒತ್ತಾಯಿಸಿದ್ದವು. ಕಾಂಗ್ರೆಸ್ ಭಾನುವಾರ ಹೈದರಾಬಾದ್‍ನಲ್ಲಿ ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿಯೂ ಈ ಕುರಿತು ನಿರ್ಣಯ ಅಂಗೀಕರಿಸಿತು.
BIG NEWS; 5 ದಿನದಲ್ಲಿ ಭಾರತ ತೊರೆಯುವಂತೆ ಕೆನಡ ರಾಜತಾಂತ್ರಿಕರಿಗೆ ಸೂಚನೆ
2008ರ ಮಸೂದೆಯಲ್ಲಿ ಎರಡು ಶಿಫಾರಸುಗಳನ್ನು ಅಳವಡಿಸಿರಲಿಲ್ಲ. ಹೀಗಾಗಿ, ಮಸೂದೆಯನ್ನು ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಗೆ ರವಾನಿಸಲಾಗಿತ್ತು. ಆದರೆ ಅದು ತನ್ನ ಅಂತಿಮ ವರದಿಯಲ್ಲಿ ಒಮ್ಮತಕ್ಕೆ ಬರುವಲ್ಲಿ ವಿಫಲವಾಯಿತು. ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕು ಮತ್ತು ವಿಳಂಬ ಮಾಡದೆ ಕಾರ್ಯರೂಪಕ್ಕೆ ತರಬೇಕು ಎಂದು ಶಿಫಾರಸು ಮಾಡಿದೆ. ಸಮಿತಿಯ ಇಬ್ಬರು ಸದಸ್ಯರಾದ ವೀರೇಂದ್ರ ಭಾಟಿಯಾ ಮತ್ತು ಶೈಲೇಂದ್ರ ಕುಮಾರ್ ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ಬೆಂಬಲಿಸಿದ್ದರು. ಆದರೆ ಈ ಮಸೂದೆಯನ್ನು ರಚಿಸುವ ರೀತಿಯನ್ನು ಒಪ್ಪುವುದಿಲ್ಲ ಎಂದು ಅಸಮ್ಮತಿ ವ್ಯಕ್ತಪಡಿಸಿದ್ದರು.
UnionCabinet, #Approves, #Women, #ReservationBill,