ದೇಶದಲ್ಲಿ ಈವರೆಗೆ 28 ಕೋಟಿ ಇ-ಶ್ರಮ ಕಾರ್ಡ್ ನೀಡಲಾಗಿದೆ : ಪ್ರಹ್ಲಾದ್ ಜೋಷಿ

Social Share

ಬೆಂಗಳೂರು, ಜು.10- ದೇಶದಲ್ಲಿ 28 ಕೋಟಿ ಇ-ಶ್ರಮ ಕಾರ್ಡ್ ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.ನಗರದಲ್ಲಿಂದು ನಡೆದ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆಯಿಂದ ನಗರ ಪ್ರದೇಶಗಳಿಗೆ ವಲಸೆ ಬರುವ ಕಾರ್ಮಿಕರು ಯಾವುದೇ ನಗರಕ್ಕೆ ಹೋದರೂ ಪಡಿತರ ಸಿಗುತ್ತದೆ. ಅಲ್ಲದೆ, ಸ್ವಯಂ ವ್ಯಾಪಾರ ಮಾಡಲು ಸ್ವ ನಿ ಯೋಜನೆಯಡಿ 10 ಸಾವಿರ ರೂ. ನೀಡಲಾಗುವುದು ಎಂದರು.

ನಮ್ಮ ಸರ್ಕಾರ 15 ದಿನಕ್ಕೊಂದು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ದೇಶದಲ್ಲಿ ಈ ಹಿಂದೆ ಆಳ್ವಿಕೆ ಮಾಡಿದಂತಹ ಸರ್ಕಾರಗಳು ಬಡವರ ಪರವಾಗಿ ಮಾತನಾಡುತ್ತಿದ್ದವು ಅಷ್ಟೆ. ಆದರೆ, ಬಡವರ ಪರ ಕಾಳಜಿಯನ್ನು ತೋರಿರಲಿಲ್ಲ. ಅವರ ಉದ್ಧಾರಕ್ಕಾಗಿ ಯಾವುದೇ ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಿಲ್ಲ. ನಾವು ಅಕಾರಕ್ಕೆ ಬಂದ ನಂತರ ಬಡವರಿಗಾಗಿ ಇ-ಶ್ರಮ ಕಾರ್ಡ್ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಇದುವರೆಗೂ ಎರಡು ಬಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ವಿಚಾರವನ್ನು ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಪ್ರಸ್ತಾಪಿಸಿದಾಗ ಅಲ್ಲಿನ ಸಚಿವರು ಆಶ್ಚರ್ಯಚಕಿತರಾಗಿ ಕೇಳಿದರು ಎಂದರು.
ಸಂವಿಧಾನದ ಪರಿಚ್ಛೇದ 370ನೆ ವಿ ರದ್ದುಪಡಿಸಿದ್ದರಿಂದ ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ನಡೆಯುತ್ತಿಲ್ಲ.

ನಮ್ಮ ಸರ್ಕಾರದ ಬಗ್ಗೆ ಯಾವುದೇ ಭ್ರಷ್ಟಾಚಾರ, ಹಗರಣದ ಆರೋಪ ಇಲ್ಲ. ಜನರ ಗಮನವನ್ನು ಸೆಳೆಯಲು ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಉತ್ತಮ ಆಡಳಿತ ನೀಡುತ್ತಿರುವುದರಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಮರಳಿ ಬರುತ್ತಿವೆ. ಇದರಿಂದ ಕಾಂಗ್ರೆಸ್‍ನವರಿಗೆ ಏನೂ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸ್ವಾಮೀಜಿ ಅವರ ಸರ್ಕಾರ ಮರಳಿ ಅಕಾರಕ್ಕೆ ಬಂದಿದೆ. ನಮ್ಮ ರಾಜ್ಯದಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರವೂ ಚೆನ್ನಾಗಿ ನಡೆಯುತ್ತಿದೆ.

ಆದರೂ ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳಿನ ಫ್ಯಾಕ್ಟರಿಯನ್ನೇ ತೆಗೆದಿದ್ದಾರೆ. ಅವರ 75ನೆ ವರ್ಷದ ಸಂದರ್ಭದಲ್ಲಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಂತ್ಯೋತ್ಸವ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ದೇಶದಲ್ಲಿ ನಿಜವಾದ ಬಡವರ ಬಂಧು ಯಾರಾದರೂ ಇದ್ದರೆ ಅವರು ನರೇಂದ್ರ ಮೋದಿ ಅವರು ಮಾತ್ರ ಎಂದು ಶ್ಲಾಘಿಸಿದರು.

Articles You Might Like

Share This Article