ವಾಷಿಂಗ್ಟನ್, ಫೆ.8- ಕಳೆದ ವರ್ಷ ಆಫ್ಘಾನಿಸ್ತಾನದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಉಗ್ರಗಾಮಿ ದಾಳಿ ನಡೆಸಿ 185ಕ್ಕೂ ಹೆಚ್ಚು ಮಂದಿ ಸಾವಿಗೆ ಕಾರಣನಾದ ಐಸಿಸ್-ಖೊರಾಸನ್ (ಐಎಸ್‍ಐಎಸ್-ಕೆ) ಮುಖ್ಯಸ್ಥ ಸನಾವುಲ್ಲಾ ಗಫಾರಿ ಮತ್ತು ಇತರ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಅಮೆರಿಕಾದ ನ್ಯಾಯಕ್ಕಾಗಿ ಬಹುಮಾನಗಳ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಶಹಾಬ್ ಅಲ್-ಮುಹಾಜಿರ್ ಎಂದು ಕರೆಯಲ್ಪಡುವ ಸನಾವುಲ್ಲಾ ಗಫಾರಿಗಾಗಿ ಭೇಟೆ ಆರಂಭಿಸಿರುವ ಅಮೆರಿಕಾ ರಕ್ಷಣಾ ಪಡೆಗಳು, ಮಾಹಿತಿ ಕಲೆ ಹಾಕಲು ಮುಂದಾಗಿವೆ.
ಕಳೆದ ವರ್ಷದ ಆಗಸ್ಟ್ 26 ರಂದು ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಅದರಲ್ಲಿ ಅಮೆರಿಕಾದ 13 ಮಂದಿ ಸೈನಿಕರು, ಸೇವಾ ಕಾರ್ಯಕರ್ತರು, ಸ್ಥಳೀಯ ಪ್ರಜೆಗಳು ಮೃತಪಟ್ಟಿದ್ದರು. ಈ ಘಟನೆಗೆ ಗಫಾರಿ ಮೂಲ ಸೂತ್ರದಾರ ಎಂದು ಹೇಳಲಾಗಿದೆ.
1994ರಲ್ಲಿ ಅಫ್ಘಾನಿಸ್ತಾನದಲ್ಲಿ ಜನಿಸಿದ ಗಫಾರಿ ಪ್ರಸ್ತುತ ಐಸಿಸ್ ಖೊರಾಸನ್ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದಾನೆ. 2020ರಿಂದಲೂ ಅಫ್ಘಾನಿಸ್ತಾನದಾದ್ಯಂತ ಎಲ್ಲಾ ಸಂಘಟನೆ ಕಾರ್ಯಾಚರಣೆಗಳನ್ನು ಅನುಮೋದಿಸುವ ಮತ್ತು ಹಣಕಾಸಿನ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾನೆ ಎಂಬ ಮಾಹಿತಿ ಇದೆ. ಗಫಾರಿ ನೇಮಕಾತಿ ವೇಳೆ ಐಸಿಸ್ ಗಫಾರಿಯನ್ನು ಕಾಬೂಲ್‍ನ ಸಿಂಹಗಳಲ್ಲಿ ತರಬೇತಿ ಪಡೆದ, ಮಿಲಿಟರಿ ನಾಯಕರಲ್ಲಿ ಒಬ್ಬರು ಎಂದು ಹೇಳಿದರು.
