ಬೆಂಗಳೂರು, ಆ.19- ಸರ್ಕಾರಿ ವಿಶ್ವ ವಿದ್ಯಾಲಯಗಳಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ಕ್ರಮ ತೆಗೆದು ಕೊಂಡಿದ್ದು, ಸಬೂಬು ಹೇಳಿಕೊಂಡು ಅದರ ಜಾರಿಗೆ ಹಿಂದೇಟು ಹಾಕುವ ಕುಲಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಅಲ್ಲದೆ ಅಂತಹವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಎಚ್ಚರಿಸಿದ್ದಾರೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ನಿನ್ನೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಅವರು ಕರ್ತವ್ಯದಲ್ಲಿ ವಿಫಲರಾಗಿರುವ ಕುಲ ಸಚಿವರ ಬಗ್ಗೆ ಕುಲಪತಿಗಳೇ ವರದಿ ನೀಡಬೇಕು ಎನ್ನುವ ಸೂಚನೆಯನ್ನೂ ನೀಡಿದರು.
ಯುಯುಸಿಎಂಎಸ್ ವ್ಯವಸ್ಥೆಯು ತಂತ್ರಜ್ಞಾನದ ವರದಾನವಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ ಮತ್ತು ಖರ್ಚು ವೆಚ್ಚದಲ್ಲಿ ಹಿಡಿತ ಸಾಧಿಸಿ ವಿ.ವಿ.ಗಳನ್ನು ನಿರ್ವಹಿಸಲು ಇದು ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಇವತ್ತಿನ ಮಟ್ಟಿಗೆ ಇದು ಪರಿಹಾರವಾಗಿರುವುದರಿಂದ ಯಾರೊಬ್ಬರೂ ಸಬೂಬುಗಳನ್ನು ಹೇಳುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ವ್ಯವಸ್ಥೆಯ ಜಾರಿಯು ಕ್ರಾಂತಿಕಾರಕ ತೀರ್ಮಾನವಾಗಿದೆ. ಯಾವುದೇ ಒಂದು ವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ಎಲ್ಲ ವಿ.ವಿ.ಗಳೂ ಯುಯುಸಿಎಂಎಸ್ ಜಾರಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು.
ಕೆಲವು ವಿ.ವಿ.ಗಳಲ್ಲಿ ಮಾತ್ರ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಿವೆ. ಬಹುತೇಕ ವಿವಿಗಳಲ್ಲಿ ಪರೀಕ್ಷೆ ನಡೆಸಿದರೂ ಮೌಲ್ಯಮಾಪನ ಮಾಡಿಲ್ಲ. ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಈ ಎಲ್ಲ ಪ್ರಕಿಯೆಗಳನ್ನು ಈ ತಿಂಗಳ ಒಳಗೆ ಮಾಡಬೇಕು ಎಂದು ತಾಕೀತು ಮಾಡಿದರು.
ಯುಯುಸಿಎಂಎಸ್ ಜಾರಿಯಲ್ಲಿ ಇರುವ ತೊಡಕುಗಳನ್ನು ತಿಳಿದುಕೊಳ್ಳಲು ಈಗಾಗಲೇ ನಿತ್ಯ ವಿಡಿಯೋ ಕಾನರೆನ್ಸಿಂಗ್ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಆದರೆ ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದರು.
ಕೆಲವು ವಿವಿಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಈ ತಂತ್ರಾಂಶದಲ್ಲಿ ಇನ್ನೂ ನಮೂದಿಸಿಯೇ ಇಲ್ಲ. ಈ ಲೋಪವನ್ನು ಆಗಸ್ಟ್ ಅಂತ್ಯದೊಳಗೆ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.
ಸಾಫ್ಟ್ ವೇರ್ ಸೇರಿದಂತೆ ಉಳಿದ ಕ್ಷೇತ್ರಗಳು ಅಗಾಧ ಪರಿವರ್ತನೆ ಕಂಡಿವೆ. ಶಿಕ್ಷಣ ಕ್ಷೇತ್ರವು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇಲ್ಲದಿದ್ದರೆ ಸರ್ಕಾರವು ನೀಡುವ ಸಾವಿರಾರು ಕೋಟಿ ರೂಪಾಯಿಗಳು ವ್ಯರ್ಥವಾಗಿ ಹೋಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೆಲವು ವಿವಿಗಳಲ್ಲಿ ಯುಯುಸಿಎಂಎಸ್ ವ್ಯವಸ್ಥೆಯನ್ನು ಯಾಕೆ ಜಾರಿಗೆ ತಂದಿಲ್ಲ ಎನ್ನುವ ಬಗ್ಗೆ ಸಮರ್ಪಕ ಕಾರಣ ನೀಡಬೇಕು. ಇಲ್ಲದಿದ್ದರೆ ತಾವು ತೀಕ್ಷ್ಣ ಕ್ರಮ ಜರುಗಿಸುವುದು ಖಂಡಿತ ಎಂದು ಅವರು ಎಚ್ಚರಿಸಿದರು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಮೊದಲಾದ ಅಧಿಕಾರಿಗಳು ಸಭೆಯಲ್ಲಿ ಇದ್ದರು.