3ನೇ ಹಂತದ ಅನ್‍ಲಾಕ್ : ಥಿಯೇಟರ್, ಶಾಪಿಂಗ್ ಮಾಲ್, ಪಬ್-ಕ್ಲಬ್ ಓಪನ್..?

ಬೆಂಗಳೂರು,ಜು.2-ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಬಹುತೇಕ ಎಲ್ಲಾ ಚಟುವಟಿಕೆಗಳು ಕಾರ್ಯಾರಂಭವಗಲಿವೆ. ಈ ಮೂಲಕ ಕಳೆದೆರಡು ತಿಂಗಳಿನಿಂದ ಸ್ತಬ್ದಗೊಂಡಿದ್ದ ಕರುನಾಡು ಮತ್ತೆ ಸಹಜ ಸ್ಥಿತಿಗೆ ಮರಳಲಿದೆ. ಸದ್ಯ ಘೋಷಣೆ ಮಾಡಿರುವ 2ನೇ ಹಂತದ ಲಾಕ್‍ಡೌನ್ ಸೋಮವಾರ ಅಂತ್ಯಗೊಳ್ಳಲಿದೆ. 3ನೇ ಅನ್‍ಲಾಕ್ ಜಾರಿ ಮಾಡುವ ಸಂಬಂಧ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವರ ಸಭೆ ಕರೆದಿದ್ದು, ಬಹುತೇಕ ಸೋಮವಾರದಿಂದ ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳು ಪುನಾರಾರಂಭಗೊಳ್ಳಲಿವೆ.

ಅನ್‍ಲಾಕ್ 03ರಲ್ಲಿ ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್-ಕ್ಲಬ್, ಬಾರ್‍ಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಅನ್‍ಲಾಕ್ 3ರಲ್ಲಿ ನೈಟ್ ಕಫ್ರ್ಯೂ ಜಾರಿಗೆ ಬಂದಲ್ಲಿ ಮಾಲ್‍ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದ್ದು, ಬೆಳಗ್ಗೆ 8ರಿಂದ ಸಂಜೆ 7ರವರೆಗೆ ತೆರೆಯಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ 10 ಗಂಟೆಗೆ ಆರಂಭವಾಗುತ್ತಿದ್ದ ಮಾಲ್‍ಗಳು ನೈಟ್ ಕಫ್ರ್ಯೂ ಜಾರಿಯಾದರೆ ಬೆಳಗ್ಗೆ ಬೇಗನೆ ತೆರೆಯಲು ಚಿಂತಿಸಿವೆ.

ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್‍ಲಾಕ್ 3 ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ರಾಜ್ಯದ ಪಾಸಿವಿಟಿ ದರ ಗಮನದಲ್ಲಿರಿಸಿಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹೋಟೆಲ್‍ಗಳಿಗೆ ಸಿಕ್ಕ ವಿನಾಯಿತಿಯಂತೆ, ಬಾರ್‍ಗಳಿಗೂ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಶೇ.50ರಷ್ಟು ಗ್ರಾಹಕರಿಗೆ ಬಾರ್‍ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುವ ಸಾಧ್ಯತೆಯಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಟೇಬಲ್ ಸರ್ವಿಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಕ್ಲಬ್, ಕ್ಲಬ್ ಹೌಸ್‍ಗಳಿಗೂ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ಪಾರ್ಟಿಯಂತಹ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ಚಿಂತನೆಯಿದೆ. ವಿಶೇಷ ಆಚರಣೆ, ಪ್ರಸಾದ ವಿತರಣೆ, ಗುಂಪು ಸೇರುವುದು ಸೇರಿದಂತೆ ಇನ್ನಿತರ ನಿರ್ಬಂಧ ಹೇರುವ ಮೂಲಕ ದೇಗುಲಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ.

ಸಧ್ಯಕ್ಕೆ ಸಿನಿಮಾ ಮಂದಿರಗಳನ್ನು ತೆರೆಯದಿರುವುದು ಒಳಿತು ಎಂದು ಕೆಲ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಜುಲೈ 15ವರೆಗೂ ಥಿಯೇಟರ್‍ಗಳು ತೆರೆಯುವುದು ಬಹುತೇಕ ಅನುಮಾನವಾಗಿದೆ. ಜುಲೈ 5ರ ನಂತರ ನೈಟ್ ಕಫ್ರ್ಯೂ ಮುಂದುವರಿಯಬಹುದು. ಸದ್ಯ ನೈಟ್ ಕಫ್ರ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದೆ. ಆದರೆ ಜುಲೈ 5ರಿಂದ ಸಂಜೆ 7 ಗಂಟೆಯಿಂದ ನೈಟ್ ಕಫ್ರ್ಯೂ ಜಾರಿಯಾಗುವ ಸಾಧ್ಯತೆಯಿದೆ. ವಿಕೇಂಡ್ ಕಫ್ರ್ಯೂ ಯಥಾಸ್ಥಿತಿ ಮುಂದುವರಿಯುತ್ತದೆ.

ಕಳೆದ ಏಪ್ರಿಲ್ 27ರಿಂದ ರಾಜ್ಯದಲ್ಲಿ ಕೊರೋನಾ ಲಾಕ್‍ಡೌನ್ ಜಾರಿ ಮಾಡಲಾಗಿತ್ತು. ನಂತರ ಅದು ಜೂ.14ರ ಬಳಿಕ ಸ್ವಲ್ಪ ಸಡಿಲಿಕೆ ನೀಡಲಾಯಿತು. ತದನಂತ ಜೂ. 21 ರಿಂದ ಅನ್‍ಲಾಕ್ 2.0ಜಾರಿಗೆ ತರಲಾಯಿತು. ಕೆಲವು ನಿರ್ಬಂಧಗಳೊಂದಿಗೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಮೊದಲು 16 ಜಿಲ್ಲೆಗಳಲ್ಲಿ ಅನ್‍ಲಾಕ್ ಘೋಷಣೆ ಮಾಡಿ ನಂತರ ಆ ಪಟ್ಟಿಗೆ 6 ಜಿಲ್ಲೆಗಳನ್ನು ಸೇರಿಸಲಾಗಿತ್ತು.

ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆ ಆದರೆ ಮಾತ್ರ ಅನ್ಲಾಕ್ ಜಾರಿಗೆ ತರಬಹುದು ಎಂದು ತಜ್ಞರು ಸಲಹೆ ನೀಡಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 1.97 ರಷ್ಟಿದೆ. ಹಾಗಾಗಿ ಅನ್‍ಲಾಕ್-3 ಜಾರಿಯಾಗುವ ಸಾಧ್ಯತೆಗಳಿವೆ. ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ರಾಜ್ಯದಲ್ಲಿ ಹಂತ ಹಂತವಾಗಿ ಅನ್‍ಲಾಕ್ ಪ್ರಕ್ರಿಯೆ ಕೂಡ ಆರಂಭವಾಗಿದೆ. ಹೀಗಾಗಲೆ ಕೆಲವು ಜಿಲ್ಲೆಗಳಿಗೆ ಅನ್‍ಲಾಕ್ ಘೋಷಿಸಲಾಗಿದೆ.

ಮೈಸೂರು ಸೇರಿದಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪಾಸಿಟಿವಿಟಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಎಲ್ಲಾ ವಲಯಗಳಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಆ ರಾಜ್ಯಗಳಿಂದ ಬರುವವರಿಗೆ ರಾಜ್ಯ ಸರ್ಕಾರ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಅಥವಾ 2 ಡೋಸ್ ಲಸಿಕಾ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ಈ ರಾಜ್ಯಗಳಿಂದ ಬರುವವರಿಗೆ ಹೊರಡಿಸಲಾಗಿರುವ ಮಾರ್ಗಸೂಚಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.