ಲಖ್ನೋ,ಜ.28- ವರನ ವರ್ತನೆಯಿಂದ ಅಸಮಾಧಾನಗೊಂಡ ವಧು ಮದುವೆ ದಿನವೇ ವಿವಾಹವಾಗಲು ನಿರಾಕರಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಔರಿಯಾ ಜಿಲ್ಲೆಯ ಬಿಧುನಾ ಕೊಟ್ವಾಲಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ.
ವರ್ಮಲಾ ಸಮಾರಂಭದಲ್ಲಿ ವರ ಆಕಾಶ್ ತನಗೆ ನೀಡಿದ್ದ ಹೂವಿನ ಹಾರವನ್ನು ಎಸೆದಿದ್ದರಿಂದ ಮದುವೆ ಮನೆಯಲ್ಲಿ ಕೆಲಕಾಲ ಗದ್ದಲ ಉಂಟಾಗಿದೆ. ಘಟನೆಯ ನಂತರ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ.ಇದರಿಂದ ಅಸಮಾಧಾನಗೊಂಡ ವಧು, ತಾನು ಈ ಮದುವೆಯಾಗುವುದಿಲ್ಲ ಎಂದು ವರನನ್ನು ನಿರಾಕರಿಸಿದ್ದಾಳೆ. ವಧುವಿನ ನಿರ್ಧಾರಕ್ಕೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.
ನೆರೆದಿದ್ದ ಜನ, ಸಂಬಂಧಿಕರು ವಧುವನ್ನು ಮದುವೆಯಾಗುವಂತೆ ಸಾಕಷ್ಟು ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಕಿವಿಗೊಡದ ವಧು ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ.
