ಲಕ್ನೋ,ಫೆ.26- ಹಲವು ಅಡೆತಡೆಗಳ ಬಳಿಕ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಅಯೋಧ್ಯೆ ಜಿಲ್ಲೆ ಧನ್ನಿಪುರದಲ್ಲಿ ಶೀಘ್ರವೇ ಮಸೀದಿ ನಿರ್ಮಾಣ ಆರಂಭಗೊಳ್ಳುವ ನಿರೀಕ್ಷೆಗಳಿವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತಿಳಿಸಿದೆ.
ಆರಂಭದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‍ಒಸಿ) ಪಡೆಯುವಲ್ಲಿ ವಿಳಂಬವಾಗಿತ್ತು. ನಂತರ ಭೂ ಬಳಕೆ ಬದಲಾವಣೆಯಲ್ಲಿ ವಿಳಂಬವಾಯಿತು. ಈಗ ಎಲ್ಲಾ ಅನುಮತಿಗಳು ದೊರೆಯುವ ಕಾಲ ಸನ್ನಿತವಾಗಿದೆ. ರಾಜ್ಯ ಸರ್ಕಾರ ನೀಡಿರುವ ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಕೋಣೆ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ಮುಖ್ಯಸ್ಥ ಅರ್ಷದ್ ಖಾನ್ ತಿಳಿಸಿದ್ದಾರೆ.
ಭೂ ಬಳಕೆಯ ಬದಲಾವಣೆಯ ವಿಷಯವು ಅಯೋಧ್ಯೆ ಅಭಿವೃದ್ಧಿ ಪ್ರಾಕಾರದಲ್ಲಿ (ಎಡಿಎ) ಕಳೆದ ನಾಲ್ಕು ತಿಂಗಳಿಂದ ಬಾಕಿ ಉಳಿದಿತ್ತು, ಈ ವಾರದಲ್ಲಿ ಅದು ಬಗೆಹರಿಯುವ ನಿರೀಕ್ಷೆಯಿದೆ. ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಂಜೂರಾದ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಕೋಣೆ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಅನುಮೋದನೆ ಕೋರಿ ಜುಲೈ 2020 ರಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದರೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೆಲವು ದಿನಗಳ ಹಿಂದೆಯೇ ಅನುಮೋದನೆ ನೀಡಲಾಗಿದೆ. ಭೂ ಬಳಕೆ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ, ಎಡಿಎ ಆನ್‍ಲೈನ್‍ನಲ್ಲೇ ಅರ್ಜಿ ಸಲ್ಲಿಸಬೇಕು ಎಂದು ಹೇಳಿತ್ತು. ಟ್ರಸ್ಟ್ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅಸಮರ್ಥತೆ ಹೊಂದಿದೆ ಎಂದು ಹೇಳಿದರು ಪರಿಗಣಿಸಲಿಲ್ಲ. ಕೊನೆಗೆ ಆನ್‍ಲೈನಲ್ಲೇ ಅರ್ಜಿ ಸಲ್ಲಿಸಲಾಯಿತು. ಆ ವೇಳೆ ಪೋರ್ಟಲ್‍ಗೆ 15 ರಿಂದ 16 ಎನ್‍ಒಸಿಗಳನ್ನು ಲಗತ್ತಿಸಬೇಕಿತ್ತು. ಆ ದಾಖಲೆಗಳನ್ನು ಪಡೆಯಲು ಟ್ರಸ್ಟ್‍ಗೆ ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಖಾನ್ ಹೇಳಿದ್ದಾರೆ.
ವಿಷಯವನ್ನು ಅಂದಿನ ಜಿಲ್ಲಾಕಾರಿಗಳ ಗಮನಕ್ಕೆ ತಂದಾಗ ಅವರು ಎನ್‍ಒಸಿ ಪಡೆಯಲು ಸಹಾಯ ಮಾಡಿದರು. ಎನ್‍ಒಸಿ ಬಂದ ನಂತರ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಭೂ ಬಳಕೆ ಬದಲಾವಣೆಯ ವಿಷಯ ಪ್ರಸ್ತಾಪ ಸಲ್ಲಿಸಲಾಯಿತು. ಟ್ರಸ್ಟ್ನ್ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆ ಮನವಿ ಮಾಡಿದಾಗಲೇಲ್ಲಾ ಮುಂದಿನ ವಾರ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾ ಕಾಲ ಕಳೆದಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ.
ಎಡಿಎ ಅಧ್ಯಕ್ಷ ಮತ್ತು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸರಕಾರದಿಂದ ನಮಗೆ ಸೂಚನೆ ಬಂದಿದ್ದು, ಸೋಮವಾರದ ಒಳಗಾಗಿ ಭೂಮಿ ಬಳಕೆ ಬದಲಾವಣೆಯ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2019ರ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಆದೇಶಿಸಿತು. ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸೂಚಿಸಿತ್ತು.
#UP, #mosque, #constructionwork, #start, #Ayodhya,