ಕಲಬುರಗಿ,ಮಾ.7- ಹಾಲಿ 4ರಿಂದ 6 ಆರು ಶಾಸಕರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಾಲಿ ಬೆರಳೆಣಿಕೆಯ ಶಾಸಕರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಟಿಕೆಟ್ ಸಿಗಲಿದೆ. ಸಮಯ ಮತ್ತು ಪರಿಸ್ಥಿತಿ ನೋಡಿಕೊಂಡು ಕೇಂದ್ರ ವರಿಷ್ಠರು ರಾಜ್ಯ ಘಟಕದ ನಾಯಕರ ಜೊತೆ ಚರ್ಚಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಗೆಲವೇ ಮಾನದಂಡವಾಗಿರುವುದರಿಂದ ಪ್ರತಿಯೊಂದು ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಟಿಕೆಟ್ ಕೊಡುತ್ತಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು
ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಶಿಕಾರಿಪುರ ಸೇರಿದಂತೆ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು. ಕಾರ್ಯಕರ್ತರು ಇದೇ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎಂದರು.
ಅಂತಿಮವಾಗಿ ವಿಜಯೇಂದ್ರ ಎಲ್ಲಿಂದ ಸರ್ಧೆ ಮಾಡಬೇಕೆಂಬುದು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಇದಕ್ಕೆ ಪ್ರತಿಯೊಬ್ಬರು ಬದ್ದರಾಗಿ ಇರಬೇಕು. ವ್ಯಕ್ತಿ ಪ್ರತಿಷ್ಟೆಗಿಂತ ಪಕ್ಷದ ಗೆಲುವು ಮುಖ್ಯ. ವರಿಷ್ಠ ಮಂಡಳಿಯ ತೀರ್ಮಾನಕ್ಕೆ ಎಲ್ಲರು ತಲೆ ಬಾಗಬೇಕಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು ಆ ಪಕ್ಷದಲ್ಲಿ ಯಾರೊಬ್ಬರೂ ನಾಯಕರಿಲ್ಲ. ಹೇಳುವವರು, ಕೇಳುವವರು ಇಲ್ಲದೆ ಅನಾಥವಾಗಿದೆ. ಮೊದಲು ನಿಮ್ಮ ನಾಯಕ ಯಾರು ಎಂದು ಬಹಿರಂಗಪಡಿಸುವಂತೆ ಸವಾಲು ಹಾಕಿದರು.
ಬಿಜೆಪಿಗೆ ಬಲಿಷ್ಠ ನಾಯಕತ್ವವಿದೆ. ಆದರೆ ಕಾಂಗ್ರೆಸ್‍ನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇರುವುದು ಬೆರಳಣಿಕೆಯಷ್ಟು ಮಂದಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕರ್ನಾಟಕಕ್ಕೆ ಕರೆಸಿ ಏಕೆ ಪ್ರಚಾರ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರಮೋದಿ ಕುರಿತು ಲಘುವಾಗಿ ಮಾತನಾಡುವ ಅಗತ್ಯವಿಲ್ಲ. ಮೊದಲು ತಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಸರ್ಕಾರ ಅಧಿಕಾರದಲ್ಲಿದ್ದಾಗ ಹಗರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಲೋಕಾಯುಕ್ತ ಸಂಸ್ಥೆಗೆ ಬೀಗ ಹಾಕಿದವರು ಈಗ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಹೊಸ ರೂಲ್ಸ್
ಕಾಂಗ್ರೆಸ್‍ನಲ್ಲಿರುವ ಒಬ್ಬೊಬ್ಬರು ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಓದಿಸಿದಂತೆ ಎಂದು ಅಪಹಾಸ್ಯ ಮಾಡಿದರು. ಬಿಜೆಪಿಯನ್ನು ಟೀಕೆ ಮಾಡುವುದೇ ಕಾಂಗ್ರೆಸ್‍ನವರ ಕಾಯಕವಾಗಿದೆ. ಇವರು ನಡೆಸುತ್ತಿರುವ ಪ್ರಜಾಧ್ವನಿಗೆ ಜನರೇ ಬರುತ್ತಿಲ್ಲ ಎಂದರು.
ನರೇಂದ್ರಮೋದಿ ಮತ್ತು ಬಿಜೆಪಿ ಜನಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಜನಬೆಂಬಲದಿಂದ ಕಾಂಗ್ರೆಸ್ ಹತಾಶೆಯಲ್ಲಿದೆ. ಹೀಗಾಗಿ ಅವರ ಯಾವುದೇ ಟೀಕೆ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯದ ಜನತೆಗೆ ಇದಕ್ಕೆ ಸೊಪ್ಪು ಹಾಕುತ್ತಿಲ್ಲ ಎಂದು ಬಿಎಸ್‍ವೈ ಕಿಡಿಕಾರಿದರು.
upcoming, assembly, election, BJP, MLA, ticket, bs yediyurappa,