ವಿಷ್ಣು, ಉಪ್ಪಿ, ಶೃತಿಗೆ ಜನ್ಮದಿನದ ಸಂಭ್ರಮ

Social Share

ಬೆಂಗಳೂರು,ಸೆ.18- ಕನ್ನಡ ಚಿತ್ರರಂಗದ ಖ್ಯಾತ ನಟರಾದ ಸಾಹಸಸಿಂಹ ವಿಷ್ಣುವರ್ಧನ್, ಉಪೇಂದ್ರ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಭಾರತ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನ.

ಅಭಿನವ ಭಾರ್ಗವ, ಕೋಟಿಗೊಬ್ಬ ವಿಷ್ಣು ಭೌತಿಕವಾಗಿ ಅಗಲಿದರು, ಅವರು ನೀಡಿರುವ ಕಲಾ ಸೇವೆಯಿಂದ ಕನ್ನಡಿಗರ ಮನಗಳಲ್ಲಿ ಅಜರಾಮರರಾಗಿದ್ದಾರೆ. ವಂಶವೃಕ್ಷ ಸಿನಿಮಾದ ಮೂಲಕ ತಮ್ಮ ನಟನೆ ಶುರು ಮಾಡಿದ ಯಜಮಾನ, ಕನ್ನಡ ಸಿನಿ ಜಗತ್ತಿನಲ್ಲಿ ದಾದಾ ಆಗಿ ಮೆರೆದಿದ್ದು ಇತಿಹಾಸ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರ ಇವರಿಗೆ ದೊಡ್ಡ ತಿರುವನ್ನು ತಂದುಕೊಟ್ಟಿತು. ಚಿಗುರು ಮೀಸೆಯ ಹುಡುಗ ಚಿತ್ರದುರ್ಗದ ಕೋಟೆಯ ಮೇಲೇರಿ ಗರ್ಜಿಸಿದ ಪರಿ ಇಂದಿಗೂ ನವ ನಟರಿಗೆ ಸ್ಪೂರ್ತಿ.ಕನ್ನಡ ಸಿನಿ ಹಿರಿಮೆಯನ್ನ ಬಿಂಬಿಸುವ ಕೆಲವೇ ಚಿತ್ರಗಳಲ್ಲಿ ಈ ಚಿತ್ರವು ಒಂದಾಗಿ ಉಳಿದಿರುವುದು ಹೆಮ್ಮೆಯ ಸಂಗತಿ. ಇದಾದ ನಂತರ ಸುಮಾರು 200 ಕ್ಕಿಂತಲು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೋಲಿಲ್ಲದ ಸರದಾರನಾಗಿ ಮೆರೆದರು.

ಭೂತಯ್ಯನ ಮಗ ಅಯ್ಯು, ಬಂಧನ, ಸಾಹಸಸಿಂಹ, ಯಜಮಾನ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಆಪ್ತರಕ್ಷಕ ಹೀಗೆ ಅವರ ಅನೇಕ ಚಿತ್ರಗಳು ಗಾಂಧಿನಗರದಲ್ಲಿ ಧೂಳೆಬ್ಬಿಸಿವೆ. ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಇಡೀ ಭಾರತೀಯ ಸಿನಿಮಾ ರಂಗ ವಿಷ್ಣುವರ್ಧನ್ ಅವರನ್ನು ಇಂದಿಗೂ ನೆನೆಯುತ್ತದೆ.

ಈ ಬಾರಿ ವಿಷ್ಣುವರ್ಧನ್ ಅಭಿಮಾನಿಗಳು 71ನೇ ಹುಟ್ಟು ಹಬ್ಬದ ಆಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.ಬರುವ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ದಾದಾನ ಪ್ರಮುಖ ಸಿನಿಮಾಗಳು ಐವತ್ತು ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದಾರೆ.

ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ಹಾಕಿವೆ. ಒಂದು ಕಟೌಟ್ 40 ಅಡಿ ಇದ್ದು, ಅಭಿಮಾನಿಗಳಿಗೆ ತಮ್ಮ ನಾಯಕನ ಮೇಲೆ ಎಳ್ಳಷ್ಟು ಅಭಿಮಾನ ಇಂದಿಗೂ ಕಡಿಮೆಯಾಗಲಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ವಿಷ್ಣುವರ್ಧನ್ ಅವರ 71ನೇ ಜನ್ಮದಿನೋತ್ಸವ ಅಂಗವಾಗಿ ಅಂತರರಾಷ್ಟ್ರೀಯ ಖ್ಯಾತಿಯ ಒಡಿಶಾ ಮೂಲದ ಮರಳು ಕಲಾವಿದ ಮಾನಸ್ ಕುಮಾರಸ್ವಾಮಿ, ಪುರಿಯ ಗೋಲ್ಡನ್ ಬೀಚಿನಲ್ಲಿ ಅವರ ಸುಂದರ ಮರಳು ಕೃತಿಯನ್ನು ಬಿಡಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಮರಳು ಕಲೆಯಲ್ಲಿ ಅರಳಿರುವ ವಿಷ್ಣು ಕೃತಿ ತಲೆಯ ಮೇಲೆ ಪೀಠ, ಕೆಂಪು ತಿಲಕ, ಕರ್ನಾಟಕದ ಧ್ವಜ ನೋಡಬಹುದು.

ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಅದರಲ್ಲೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ. ಅಭಿಮಾನಿಗಳ ಪಾಲಿನ ನೆಚ್ಚಿನ ಸಾಹಸಸಿಂಹ, ದಿವಂಗತ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಕಲಾ ಸೇವೆ, ಹೃದಯವಂತಿಕೆ, ಕನ್ನಡ ನಾಡು-ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣದಾಯಕ ಎಂದು ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.

ಉಪ್ಪಿಗೆ ಹ್ಯಾಪಿ ಬರ್ತಡೆ: ಇಂದು ಮತ್ತೊಬ್ಬ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಡೈರೆಕ್ಟರ್ ಮತ್ತು ನಟ ಉಪೇಂದ್ರ ಅವರ ಹುಟ್ಟುಹಬ್ಬ. ಕಾಶಿನಾಥ್ ಗರಡಿಯಲ್ಲಿ ಪಳಗಿ ನಿರ್ದೇಶನದ ಹಳೆಯ ಸೂತ್ರವನ್ನು ಬದಲಿಸಿ ಅದಕ್ಕೆ ಬೇರೊಂದು ವ್ಯಾಖ್ಯಾನ ಬರೆದು ಹೀಗೂ ಸಿನಿಮಾಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಬುದ್ಧಿವಂತ.

ಪ್ರತಿ ವರ್ಷ ಉಪೇಂದ್ರ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗಾಗಿ ಕೇಕ್ ಮತ್ತು ಉಡುಗೊರೆಗಳನ್ನು ತಂದು ಮನೆಯ ಬಳಿ, ಸಾಲಿನಲ್ಲಿ ನಿಂತು ಶುಭಾಶಯ ಹೇಳುತ್ತಿದ್ದರು ಆದರೆ ಈ ವರ್ಷ ವಿಭಿನ್ನವಾಗಿ ಹುಟ್ಟು ಹಬ್ಬದ ಆಚರಿಸಿಕೊಂಡ ಉಪ್ಪಿ ಕೇಕ್ ಮತ್ತು ಉಡುಗೊರೆಗಳನ್ನು ಪಡೆಯದೆ ತಮ್ಮ ಬಗ್ಗೆ 18 ಪದಗಳು ಮೀರದಂತೆ ಅನಿಸಿಕೆಗಳನ್ನು ಬರೆದುಕೊಂಡು ಬನ್ನಿ ಎಂದು ಈ ಹಿಂದೆ ತಿಳಿಸಿದ್ದರು. ಅದರಂತೆ ಫ್ಯಾನ್ಸï,ಬಗೆ ಬಗೆಯ ಅಭಿಪ್ರಾಯದ ಪದಗುಚ್ಛಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವರ್ಷ ಅವರದ್ದೇ ನಿರ್ದೇಶದ ಯುಐ ಸಿನಿಮಾ ಸೆಟ್ಟೇರಿ ಚಿತ್ರೀಕರಣ ನಡೆಯುತ್ತಿದೆ. ಇದು ಕೂಡ ದೊಡ್ಡ ಬಜೆಟ್ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ರಿಲೀಸ್ ಪ್ಲಾನ್ ಮಾಡಿಕೊಂಡಿದೆ. ಹಾಗೆಯೇ ರಿಲೀಸ್ ಗೆ ಎಲ್ಲಾ ಸಿದ್ಧತೆಗಳು ನಡೆಸಿರುವ ಕಬ್ಜ ಚಿತ್ರ ಕೂಡ ಬಹುಕೋಟಿ ನಿರ್ಮಾಣದ ಸಿನಿಮಾವಾಗಿದೆ.

ಸದ್ಯ ಗಾಂಧಿನಗರದಲ್ಲಿ ತುಂಬಾ ಭರವಸೆ ಮೂಡಿಸಿರುವ ಈ ಚಿತ್ರದಲ್ಲಿ ಉಪೇಂದ್ರ 40, 80ರ ದಶಕಗಳ ನಡುವೆ ನಡೆದ ಭೂಗತ ಲೋಕದ ಕಥೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಭಾರತಾದ್ಯಂತ ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ತಂಡ ಉಪ್ಪಿ ಹುಟ್ಟುಹಬ್ಬಕ್ಕಾಗಿ ನಿನ್ನೆ ಟೀಸರ್ ಅನ್ನು ಅದ್ದೂರಿಯಾಗಿ ಲಾಂಚ್ ಮಾಡಿದೆ. ಸದಾ ಹೊಸತನಕ್ಕೆ ಹಂಬಲಿಸುವ ಉಪ್ಪಿಗೆ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲಾ ನಟ ನಟಿಯರು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಶೃತಿಗೆ ಸಂಭ್ರಮ: ಅಸೆಗೊಬ್ಬ ಮೀಸೆಗೊಬ್ಬ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಪಡೆದ ಶೃತಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ. ಅಳುಮುಂಜಿಯ ಪಾತ್ರಗಳ ಮೂಲಕ ಕನ್ನಡಿಗರಿಗೆ ಚಿರಪಂಚಿತವಾಗಿರುವ ನಟಿ ಶ್ರುತಿ ಅವರ ಹೆಸರು ಕನ್ನಡ ಚಿತ್ರರಂಗದಲ್ಲಿ ಅಜರಾಮರ.

ಕಿರುತೆರೆಯಲ್ಲಿ ಬರುವ ಬಿಗ್‍ಬಾಸ್‍ನಲ್ಲಿ ಸ್ರ್ಪಧಿಸಿ ಸಮರ್ಥ ಎದುರಾಳಿಗಳನ್ನು ಮಣಿಸಿ ಅವರು ಬಿಗ್‍ಬಾಸ್ ಆಗಿ ಹೊರಹೊಮ್ಮಿದ್ದರು. ಇಂದಿಗೂ ತಮ್ಮ ಅಭಿನಯ ಮುಂದುವರೆಸಿರುವ ಶೃತಿ ಅವರು ಖಾಸಗಿ ವಾಹಿನಿ ನಡೆಸಿಕೊಡುವ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದ ಜಡ್ಜ್ ಆಗಿ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

Articles You Might Like

Share This Article