ನವದೆಹಲಿ,ಫೆ.1- ಮಧ್ಯಕರ್ನಾಟಕಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಭದ್ರ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5300 ಕೋಟಿ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.
ಕರ್ನಾಟಕದ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು 5300 ಕೋಟಿ ಅನುದಾನ ಹಾಗೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಾರೆ.
ಈ ಮೂಲಕ ಭದ್ರ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ. 5,57,022 ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡಲಿದೆ.
ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆ ಎಂಬ ಹಿರಿಮೆಗೆ ಭದ್ರಾ ಮೇಲ್ದಂಡೆ ಪಾತ್ರವಾಗಿದೆ. ಹನಿ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸುವ ಬೃಹತ್ ಗಾತ್ರದ ನೀರಾವರಿ ಯೋಜನೆ ಇದಾಗಿದೆ. ಇತರ ರಾಜ್ಯಗಳ ನೀರಾವರಿ ಯೋಜನೆಗಳಿಗೂ ಇದು ಮಾದರಿಯಾಗಲಿದೆ.
ಕೇಂದ್ರ ಬಜೆಟ್ : 2023-2024 ( Live Updates)
ಏನಿದು ಯೋಜನೆ?:
ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದಿಂದ ಮಧ್ಯಕರ್ನಾಟಕಕ್ಕೆ ನೀರುಣಿಸುವುದೇ ಭದ್ರಾ ಮೇಲ್ದಂಡೆ ಉದ್ದೇಶವಾಗಿದೆ. ವರ್ಷಕ್ಕೆ 29.9 ಟಿಎಂಸಿ ಅಡಿ ನೀರನ್ನು ಮೇಲ್ದಂಡೆಗೆ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ. ಹೆಸರು ಭದ್ರಾ ಮೇಲ್ದಂಡೆ ಎಂದಿದ್ದರೂ ತುಂಗಾ ನದಿಯ ಪಾಲು ಹೆಚ್ಚಿದೆ.
ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ರತಿ ವರ್ಷ ಜೂನ್‍ನಿಂದ ಅಕ್ಟೋಬರ್‍ವರೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ತರುವ ಸಾಹಸಮಯ ಕೆಲಸ ಯೋಜನೆಯ ಭಾಗವಾಗಿದೆ. ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ನೀರನ್ನು ಭದ್ರಾ ಮೇಲ್ದಂಡೆಗೆ ಹರಿಸಲಾಗುತ್ತದೆ.
ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶ. ವಿ.ವಿ.ಸಾಗರ ಜಲಾಶಯಕ್ಕೂ 2.5 ಟಿಎಂಸಿ ಅಡಿ ನೀರನ್ನು ಒದಗಿಸಲಾಗುತ್ತದೆ. ನಾಲ್ಕು ಜಿಲ್ಲೆಯ 5.57 ಲಕ್ಷ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಬಹುದೊಡ್ಡ ಯೋಜನೆ ಇದಾಗಿದೆ. 2,25,515 ಹೆಕ್ಟೇರ್ ಪ್ರದೇಶ ಹಸನಾಗಲಿದ್ದು, 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ.
ಸತತ 5 ಬಜೆಟ್ ಮಂಡಿಸಿದ 6ನೇ ಸಚಿವೆ ನಿರ್ಮಲಾ ಸೀತಾರಾಮನ್
ಯೋಜನೆ ರೂಪುಗೊಂಡಿದ್ದು ಹೀಗೆ :
2003ರಲ್ಲಿ ರೂಪುಗೊಂಡ ಯೋಜನೆಗೆ ?2 ಸಾವಿರ ಕೋಟಿ ಮೀಸಲಿಡಲಾಯಿತು. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ 2004ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಪರಿಷ್ಕೃತ ಯೋಜನೆಗೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ, 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತು. 2015ರಲ್ಲಿ ಮತ್ತೆ ಪರಿಷ್ಕರಣೆ ಮಾಡಿ 12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ತುಮಕೂರು ಹಾಗೂ ಚಿತ್ರದುರ್ಗ ಶಾಖಾ ಕಾಲುವೆಗಳು ಕವಲೊಡೆಯುತ್ತವೆ. ಚಿತ್ರದುರ್ಗ ಶಾಖಾ ಕಾಲುವೆಗೆ 11.96 ಟಿಎಂಸಿ ಅಡಿ ನೀರು ಹಾಗೂ ತುಮಕೂರು ಶಾಖಾ ಕಾಲುವೆಗೆ 9.4 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.
ಪ್ರಾರ್ಥನೆ ಸಲ್ಲಿಸುವವರ ಮೇಲೆ ಭಾರತದಲ್ಲೂ ದಾಳಿ ನಡೆಸಲ್ಲ : ಪಾಕ್ ಸಚಿವ
ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗುವುದು. 159 ಕಿ.ಮೀ ಉದ್ದದ ತುಮಕೂರು ಶಾಖಾ ಕಾಲುವೆ ನಿರ್ಮಾಣ ಕಾಮಗಾರಿ ತೀರಾ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಾಗಿ, ಪರ್ಯಾಯ ಮಾರ್ಗದ ಮೂಲಕ ವಿ.ವಿ.ಸಾಗರಕ್ಕೆ ಭದ್ರಾ ನೀರು ಹರಿಸಲಾಗುತ್ತಿದೆ.
Upper Bhadra Irrigation Project, ₹5300, crore, grant, Budget 2023,