ಮಾಸ್ಕೋ,ಫೆ.22- ರಷ್ಯಾ ಪ್ರತ್ಯೇಕತಾವಾದಿ ಪೂರ್ವ ಉಕ್ರೇನ್‍ಅನ್ನು ಗುರುತಿಸಲು ಕ್ರಮ ಕೈಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋಬಿಡೆನ್ ಅವರು ಹೊಸದಾಗಿ ಆರ್ಥಿಕ ದಿಗ್ಬಂಧನ ಹೇರಲು ಆದೇಶಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಈ ಕ್ರಮ ರಷ್ಯಾದ ಅಂತಾರಾಷ್ಟ್ರೀಯ ಬದ್ಧತೆಯ ಪ್ರಚ್ಛನ್ನ ಉಲ್ಲಂಘನೆ ಎಂದು ಬಿಡೆನ್ ಆಡಳಿತ ವ್ಯಾಖ್ಯಾನಿಸಿದೆ. ಈ ಆರ್ಥಿಕ ದಿಗ್ಬಂಧನ ಪುಟಿನ ಅವರು ಗುರುತಿಸಿರುವ ಉಕ್ರೇನ್‍ನ ಎರಡು ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಹೊಸ ಹೂಡಿಕೆ, ವ್ಯಾಪಾರ ವಹಿವಾಟು ಮತ್ತು ಹಣಕಾಸು ನೆರವನ್ನು ನಿಷೇಧಿಸುತ್ತದೆ.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ದಾಳಿಯ ಬೆದರಿಕೆ ನಡುವೆ ಪೂರ್ವ ಉಕ್ರೇನ್‍ನಲ್ಲಿ ರಷ್ಯಾ ಗುರುತಿಸಿರುವ ಎರಡು ಪ್ರದೇಶಗಳ ಮೇಲೆ ದಿಗ್ಬಂಧನ ವಿಧಿಸಲಾಗುತ್ತಿದೆ ಎಂದು ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶಗಳನ್ನು ಗುರುತಿಸಿರುವುದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‍ಲೀನ್ ಮತ್ತು ಮಂಡಳಿ ಅಧ್ಯಕ್ಷ ಚಾಲ್ರ್ಸ್ ಮೈಕೇಲ್ ಜಂಟಿ ಹೇಳಿಕೆ ನೀಡಿದ್ದಾರೆ.
