ಬೆಂಗಳೂರು,ಫೆ.21-ರಾಜ್ಯದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷ ಯು.ಟಿ.ಖಾದರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಯುವಕನ ಹತ್ಯೆ ಪ್ರಕರಣದಲ್ಲಿ ಯಾರೇ ಇರಲಿ ಪತ್ತೆಹಚ್ಚುವ ಕೆಲಸ ಮಾಡಿ ಇಂತಹ ಘಟನೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಇದು ಸರ್ಕಾರದ ವೈಫಲ್ಯವೇ ಎಂದು ಪ್ರಶ್ನಿಸಿದರು.
ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಸಚಿವರಾದ ಈಶ್ವರಪ್ಪ, ಅರಗ ಜ್ಞಾನೇಂದ್ರ ಅವರಿಗೆ ನಾಚಿಕೆಯಾಗಬೇಕು. ಹಾಡುಹಗಲೇ ಯುವಕನ ಕೊಲೆಯಾಗಿದೆ. ಆರೋಪಿಗಳನ್ನು ಪತ್ತೆಹಚ್ಚುವುದನ್ನು ಬಿಟ್ಟು ಹೇಳಿಕೆ ಕೊಡುವುದು ಸರಿಯಲ್ಲ. ಮೊದಲು ಆರೋಪಿಗಳನ್ನು ಪತ್ತೆಹಚ್ಚಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಈಶ್ವರಪ್ಪ ಅವರನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಅಜಯ್ ಧರ್ಮಸಿಂಗ್ ಮಾತನಾಡಿ, ನಾಲ್ಕು ದಿನ ಅಹೋರಾತ್ರಿ ಧರಣಿ ಮಾಡಿದ್ದಾರೆ. ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿದರು. ಜೆಡಿಎಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಇದೇ ಸಂದರ್ಭದಲ್ಲಿ ಟೀಕಿಸಿದರು.
ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಗೃಹ ಸಚಿವರ ಜಿಲ್ಲೆಯಲ್ಲೇ ಪದೇ ಪದೇ ಘಟನೆಗಳು ನಡೆಯುತ್ತಿವೆ. ಯುವಕನ ಕೊಲೆಯಾಗಿದೆ. ಇದನ್ನು ಗಮನಿಸಿದರೆ ಗೃಹ ಸಚಿವರ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
