ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನಕ್ಕೆ ಯು.ಟಿ.ಖಾದರ್ ನೇಮಕ

Social Share

ಬೆಂಗಳೂರು, ಜ.30- ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.
ಇಬ್ರಾಹಿಂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದರು. ಅವರ ಬದಲು ಬಿ.ಕೆ.ಹರಿಪ್ರಸಾದ್‍ರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿತ್ತು. ಇದರಿಂದ ಸಿಟ್ಟಾದ ಇಬ್ರಾಹಿಂ ಅವರು ಕಾಂಗ್ರೆಸ್ ವಿರುದ್ಧ ಬಹಿರಂಗ ವಾಗ್ದಾಳಿಗೆ ಇಳಿದಿದ್ದಾರೆ.
ಅದಕ್ಕೆ ಪ್ರತ್ಯುತ್ತರಿಸಲು ಅಲ್ಪಸಂಖ್ಯಾತ ಸಮುದಾಯದ ಯು.ಟಿ.ಖಾದರ್ ಅವರನ್ನು ಶಾಸಕಾಂಗ ಪಕ್ಷದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಈ ಸ್ಥಾನದ ಮೇಲೆ ಕಾಂಗ್ರೆಸ್‍ನ ಎರಡನೇ ಸಾಲಿನ ಹಲವು ನಾಯಕರು ಕಣ್ಣಿಟ್ಟಿದ್ದರು. ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಸೂಕ್ತ ಸ್ಥಾನ ಮಾನಕ್ಕಾಗಿ ತೆರೆಮರೆಯಲ್ಲಿ ಲಾಬಿ ನಡೆಸುತ್ತಲೆ ಇದ್ದಾರೆ.
ಆದರೆ ಯಾವುದೇ ಲಾಬಿ ನಡೆಸದೆ ಇದ್ದರೂ ಯು.ಟಿ.ಖಾದರ್ ಅವರಿಗೆ ಹೈಕಮಾಂಡ್ ಅವಕಾಶ ನೀಡಿದೆ. ಕರಾವಳಿ ಭಾಗದಲ್ಲಿ ಸಂಘ ಪರಿಹಾರ ಮತ್ತು ಬಿಜೆಪಿ ಪ್ರಬಲವಾಗಿದ್ದು, ಅಲ್ಲಿ ಪಕ್ಷಕ್ಕೆ ಬಲ ನೀಡಲು ಯು.ಟಿ.ಖಾದರ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article