ಯಮುನೋತ್ರಿ ಹೆದ್ದಾರಿಯಲ್ಲಿ ಕುಸಿದ ಸುರಕ್ಷತಾ ಗೋಡೆ, 10 ಸಾವಿರ ಭಕ್ತರ ಪರದಾಟ
ನವದೆಹಲಿ, ಮೇ 21- ಉತ್ತರಾಖಂಡದ ಯಮುನೋತ್ರಿ ಹೆದ್ದಾರಿಯಲ್ಲಿ ಸುರಕ್ಷತಾ ಗೋಡೆ ಕುಸಿದು 10,000 ಜನರು ಸಿಲುಕಿದ್ದಾರೆ. ಪ್ರಸಿದ್ಧ ಯಾತ್ರಾ ಸ್ಥಳ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯಲಿ ಸುರಕ್ಷತಾ ಗೋಡೆ ಭಾರೀ ಮಳೆಯಿಂದ ಕುಸಿದಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ. ರಸ್ತೆ ಮಾರ್ಗ ಸಂಪೂರ್ಣ ಮುಚ್ಚಿ ಹೋಗಿದೆ. ಅದನ್ನು ತೆರವು ಮಾಡಲು ಕನಿಷ್ಠ 3 ದಿನಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಕೆಲವು ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದರೂ ದೂರದಿಂದ ದೊಡ್ಡ ವಾಹನಗಳಲ್ಲಿ ಬಂದವರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ವಾಯು ಸೇನೆ, ಪ್ರಕೃತಿ ವಿಕೋಪ ನಿರ್ವಹಣಾ ಪಡೆಯ ನೆರವು ಪಡೆಯುವ ಸಾಧ್ಯತೆಗಳ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ. ಹೆದ್ದಾರಿಯಲ್ಲಿ ಸಿಲುಕಿರುವವರಿಗೆ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಾಗಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.