“ಓಲೈಕೆ ರಾಜಕೀಯ ಡಿಕೆಶಿಗೆ ಮುಳುವಾಗಲಿದೆ”

Social Share

ಕನಕಪುರ, ಡಿ. 18- ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಲ್ಪಸಂಖ್ಯಾತರ ಮತ ಗಳಿಕೆಗಾಗಿ ಬಿಜೆಪಿಯ ವಿರುದ್ದ ಜನರನ್ನು ಎತ್ತಿಕಟ್ಟಲು ಹೋಗಿ ಅಪಹಾಸ್ಯಕ್ಕೆ ಈಡಾಗಿದ್ದಾರೆ ಎಂದು ಮಾನವಹಕ್ಕುಗಳ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ಬಾಬು ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಮಂಗಳೂರು ಬಾಂಬ್ ಪ್ರಕರಣದಲ್ಲಿ ರಾಜ್ಯ ಪೊಲೀಸರು ಬಂಧಿಸಿರುವ ಶಂಕಿತ ಉಗ್ರನನ್ನು ಓಲೈಕೆ ಮಾಡಿಕೊಳ್ಳುವ ಭರದಲ್ಲಿ ಹೇಳಿಕೆ ನೀಡಿರುವುದು ಅವರ ರಾಜಕೀಯ ಭವಿಷ್ಯಕ್ಕೆ ಮುಂದಿನ ದಿನಗಳಲ್ಲಿ ಮುಳುವಾಗಲಿದೆ. ರಾಜ್ಯದ ದಕ್ಷ ಪೊಲೀಸರು ಕೇವಲ ಅನುಮಾನದ ಮೇಲೆ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದರು.

ಶಂಕಿತನ ಚಲನವಲನ, ಕ್ರಿಮಿನಲ್ ಹಿನ್ನೆಲೆ, ಅಪರಾಧ ಕೃತ್ಯಗಳ, ಹೋಟೆಲ್ಗಳ ವಾಸ್ತವ್ಯ, ಮನೆಯಲ್ಲಿ ದೊರೆತ ಸಾಕ್ಷ್ಯಾಧಾರ ಹಾಗು ಐಸಿಸ್ ಉಗ್ರರೊಂದಿಗಿನ ಸಾಮ್ಯತೆಗಳನ್ನೆಲ್ಲಾ ಕೂಲಂಕುಶವಾಗಿ ಪರಿಗಣಿಸಿ ಸಾಕ್ಷಿಗಳನ್ನು ಕಲೆಹಾಕಿದ್ದಾರೆ.

ಹೀಗಿದ್ದರೂ ಸಹ ಸರ್ಕಾರದ ಪ್ರತಿನಿಯಾಗಿ ಕೆಲಸ ಮಾಡಿರುವ ಶಾಸಕ ಡಿ.ಕೆ.ಶಿವಕುಮಾರ್ ರಾಜ್ಯ ಪೊಲೀಸರನ್ನು ಅನುಮಾನಿಸುವ ಮೂಲಕ ಕರ್ನಾಟಕ ಪೊಲೀಸರ ಸೇವೆಯ ಬಗ್ಗೆ ಅನುಮಾನಿಸಿ ಅಗೌರವ ತೋರಿದ್ದಾರೆ. ಅಲ್ಪಸಂಖ್ಯಾತರ ಮತಗಳಿಕೆಯನ್ನು ಗುರಿಯಾಗಿಸಿಕೊಂಡು ಶಂಕಿತ ಉಗ್ರನ ಓಲೈಕೆ ಮಾಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

ರಾಜ್ಯ ಸರ್ಕಾರದಿಂದ ಚಿಲುಮೆ ಸಂಸ್ಥೆಯ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳನ್ನ ಅಮಾನತುಗೊಳಿಸಿ ಮೇಲೆ ಸೂಕ್ತ ರೀತಿಯ ಕ್ರಮಕ್ಕೆ ಆದೇಶಿಸಿ ತನಿಖೆ ನಡೆಸುತ್ತಿದೆ. ಆದರೆ ಈ ವಿಷಯನ್ನು ಮರೆಮಾಚಲು ಮಂಗಳೂರು ಪ್ರಕರಣವನ್ನು ಮುನ್ನೆಲೆಗೆ ತಂದು ಪೇಚಿಗೆ ಸಿಲುಕಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ನಡೆಸುತ್ತಿರುವ ಕನಕೋತ್ಸವದ ಹೆಸರಿನಲ್ಲಿ ಸ್ಥಳೀಯ ಮತದಾರರ ಖಾಸಗಿ ಮಾಹಿತಿಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಆ ಮೂಲಕ ಮತದಾರರಿಗೆ ಆಸೆ-ಆಮಿಷಗಳಿಗೆ ಒಳಪಡಿಸಿ ತಮ್ಮ ಮತಗಳನ್ನು ಭದ್ರಗೊಳಿಸಿಕೊಳ್ಳಲು ಮುಂದಾಗಿದ್ದಾರೆ. ಇವರ ಇಂತಹ ನಡೆಗಳನ್ನು ಜನರು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Articles You Might Like

Share This Article