ದಸರಾ 4ನೇ ದಿನ : ಸೈಕಲ್ ಸ್ಪರ್ಧೆಗೆ ಸಚಿವ ವಿ.ಸೋಮಣ್ಣ ಚಾಲನೆ

ಮೈಸೂರು, ಅ.2-ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಇಂದು ಬೆಳಗ್ಗೆ ನಗರದಲ್ಲಿ ಆಯೋಜಿಸಲಾಗಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ದಸರಾದ 4ನೇ ದಿನವಾದ ಇಂದು ನಗರದ ಹೊರವಲಯದ ಬನ್ನೂರು ಜಂಕ್ಷನ್‍ನಲ್ಲಿ ನಡೆದ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದ್ದು, ಇಂದು ಸೈಕಲ್ ಸವಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕ್ರೀಡೆಗಳು ನಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ನಮ್ಮ ಚಾತುರ್ಯತೆ, ಬುದ್ಧಿವಂತಿಕೆಯನ್ನು ಹೊರತರುತ್ತವೆ ಎಂದರು.ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ, ಸೈಕಲ್ ತುಳಿಯುವುದರಿಂದ ದೇಹದಲ್ಲಿನ ಅಂಗಾಂಗಗಳ ಕ್ರಿಯೆಯನ್ನು ಚುರುಕುಗೊಳಿಸಲಿದ್ದು, ಸದೃಢವಾಗುವಂತೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಯಾರೂ ಆತುರಪಡಬೇಡಿ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಗೆಲುವು, ಅದೇ ಒಂದು ಸಾಧನೆ ಎಂದು ಹೇಳಿದರು.

ಇಂದಿನ ಸ್ಪರ್ಧೆಯಲ್ಲಿ 180 ಪುರುಷರು ಭಾಗವಹಿಸಿದ್ದು, 100 ಕಿ.ಮೀ ಸೈಕ್ಲೋ ಸ್ಪರ್ಧೆಯನ್ನು ಬನ್ನೂರು ಜಂಕ್ಷನ್‍ನಿಂದ ಆರಂಭಿಸಿ ಟಿ.ನರಸೀಪುರ ಮೂಲಕ ಮೂಗೂರು ತಲುಪಲಿದೆ. ಅದೇ ಮಾರ್ಗದಲ್ಲಿ ಹಿಂತಿರುಗಿ ಲಲಿತಾದ್ರಿಪುರದ ಮೂಲಕ ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಸ್ಪರ್ಧೆ ಮುಕ್ತಾಯಗೊಂಡಿತು.

ಈ ಸ್ಪರ್ಧೆಯಲ್ಲಿ 80 ಮಂದಿ ಮಹಿಳೆಯರು ಭಾಗವಹಿಸಿದ್ದು, 50 ಕಿ.ಮೀ ದೂರದ ಸ್ಪರ್ಧೆಯನ್ನು ಮೂಗೂರಿನಿಂದ ಪ್ರಾರಂಭಿಸಿ ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಅಂತ್ಯವಾಯಿತು.
ಇದೇ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ, ಜಂಟಿ ನಿರ್ದೇಶಕ ರಮೇಶ್, ಆಲನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮತ್ತಿತರರಿದ್ದರು.