ಬೆಂಗಳೂರು,ಮಾ.16- ಪಕ್ಷದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಅಸಮಾಧಾನಗಳನ್ನು ನಮ್ಮ ದೆಹಲಿ ನಾಯಕರು ಸರಿಪಡಿಸಿದ್ದಾರೆ. ಇನ್ನು ಯಾವ ಸಮಸ್ಯೆ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಕೆಲವು ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಅವರು ಕೂಡ ಪರಿಹರಿಸಿಕೊಡುವ ಭರವಸೆ ಕೊಟ್ಟಿದ್ದಾರೆ.
ಎಲ್ಲಾ ಗೊಂದಲಗಳು ಬಗೆಹರಿದಿವೆ. ನಮ್ಮೊಳಗಿನ ಆಂತರಿಕ ಕಲಹಗಳಿಗೆ ತೆರೆ ಎಳೆದು ಪಕ್ಷ ಕಟ್ಟುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನನ್ನ ಬಗ್ಗೆ ಏನಾದರೂ ಮಾತಾಡಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ದೇವರು ಒಳ್ಳೆಯದನ್ನೇ ಮಾಡಲಿ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಹೈದ್ರಾಬಾದ್‍ನಲ್ಲಿ ರಾರಾಜಿಸುತ್ತಿವೆ ಬಿ.ಎಲ್ ಸಂತೋಷ್ ವಿರುದ್ಧದ ಪೋಸ್ಟರ್
ಯಡಿಯೂರಪ್ಪ ನಮ್ಮೆಲ್ಲರಿಗೂ ನಾಯಕರು. ಕೇವಲ ವಿಜಯೇಂದ್ರ ಒಬ್ಬರಿಗೆ ಅವರು ನಾಯಕರಲ್ಲ. ವಿಜಯೇಂದ್ರ ಏನು ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಪಕ್ಷ ತೊರೆಯುವ ಅವಶ್ಯಕತೆ ನನಗಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಯಡಿಯೂರಪ್ಪನವರಿಗೆ ಯಡಿಯೂರಪ್ಪ ಸಾಟಿ, ಸೋಮಣ್ಣನಿಗೆ ಸೋಮಣ್ಣನೇ ಸಾಟಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಯಡಿಯೂರಪ್ಪ ಕೂಡ ಪ್ರಮುಖರು. ಅವರ ಬಗ್ಗೆ ನಾನು ಎಂದಿಗೂ ಅಪಸ್ವರ ಎತ್ತಿಲ್ಲ. ವಿಜಯೆಂದ್ರ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಬಿಎಸ್‍ವೈ ಗಮನಿಸಲಿ ಎಂದು ಮನವಿ ಮಾಡಿದರು.
ಯಡಿಯೂರಪ್ಪರ ಹೋರಾಟ ಬೇರೆ. ನನ್ನ ಹೋರಾಟ ಬೇರೆ. ಆದರೆ ವಿಜಯೇಂದ್ರ ಅವರ ಬೆಳವಣಿಗೆಗೆ ಅವರು ಏನು ಮಾಡುತ್ತಾರೆ ಎಂಬುದನ್ನು ಹೇಳಿಕೊಂಡರೆ ಉತ್ತಮ. ನನಗೆ 72 ವರ್ಷ, ವಿಜಯೇಂದ್ರ ಅವರಿಗಿಂತ ದೊಡ್ಡ ಮಗ ಇದ್ದಾನೆ ಎಂದು ನಾನು ಹೇಳಿದ್ದೆ. ಯಡಿಯೂರಪ್ಪ ಹೆಸರು ಬಿಟ್ಟು ತಮ್ಮ ದೂರದೃಷ್ಟಿ ಏನು ಎಂದು ವಿಜಯೇಂದ್ರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
#VSomanna, #BJP, #AssemblyElections2023,