ಬೆಂಗಳೂರು,ಜ.18- ಸರ್ಕಾರವೇ ಕಡ್ಡಾಯ ಮಾಡುವುದಕ್ಕಿಂತ ಜನರೇ ಸ್ವ-ಇಚ್ಚೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು. ಇದು ಅವರ ಆರೋಗ್ಯ ದೃಷ್ಟಿಯಿಂದಲೂ ಒಳಿತು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೊಬ್ಬರಿಗೂ ಒತ್ತಾಯಪೂರ್ವಕವಾಗಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೀವೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜಿಲ್ಲಾಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಲಸಿಕೆ ಪ್ರಮಾಣ ಹೆಚ್ಚಳವಾಗಿಲ್ಲ. ತಕ್ಷಣವೇ ಇದರ ಬಗ್ಗೆ ಹೆಚ್ಚಿನ ಗಮನವಹಿಸುವಂತೆ ಸಿಎಂ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದರು. ಕೆಲವು ಜಿಲ್ಲೆಗಳಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಲಸಿಕೆ ಅಭಿಯಾನ ನಡೆಯದಿರುವುದು ನಮಗೂ ಕೂಡ ತೃಪ್ತಿ ತಂದಿಲ್ಲ. ಈಗಲೂ ಕೆಲವು ಕಡೆ ಜನರು ಲಸಿಕೆಯನ್ನು ಪಡೆಯಲು ಹಿಂಜರಿಕೆ ತೋರುತ್ತಿದ್ದಾರೆ.
ಲಸಿಕೆ ಅಭಿಯಾನ ಚುರುಕುಗೊಳಿಸಲು ಡಿಸಿಗಳಿಗೆ ಸೂಚನೆ ಕೊಡುತ್ತೇವೆ. ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಬೇಕು. ಎಂಬುದು ನಮ್ಮ ಗುರಿಯಾಗಿದೆ. ಸಾವಿನ ಪ್ರಮಾಣ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಆದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಅಸ್ಸಾಂನಲ್ಲಿ ನಿಯಮ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ತಿರುಗಾಟ ನಡೆಸಲು ಇದನ್ನು ಮಾಡಿದ್ದಾರೆ. ಲಸಿಕೆ ಪಡೆಯದೇ ಇರುವವರಿಂದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ಕ್ರಮ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಶೇ.0.04 ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ. ಆದರೂ ಸರ್ಕಾರ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುತ್ತೆ. ಪ್ರತಿ ಜೀವ ಮುಖ್ಯ ಹೀಗಾಗಿ ಚಿಕಿತ್ಸೆ ಮತ್ತು ಸಾವಿನ ಬಗ್ಗೆ ಲೆಕ್ಕ ಮಾಡುತ್ತೇವೆ ಎಂದು ತಿಳಿಸಿದರು.
ಲಸಿಕೆ ಕಡ್ಡಾಯ ಅಲ್ಲ ಅನ್ನೊ ಸುಪ್ರೀಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸ್ಸಾಂ ಸಿಎಂ ನಿನ್ನೆ ಹೇಳಿದ್ದಾರೆ. ಲಸಿಕೆ ಪಡೆಯದವರು ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ಜನರ ಒಳಿತಿಗಾಗಿ ಇದನ್ನ ಮಾಡಲಾಗಿದೆ. ಇದು ಸಾಂಕ್ರಾಮಿಕ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದು ಎಂಬುದು ಇದರ ಉದ್ದೇಶ ಎಂದರು.
