ಸಚಿವಾಲಯ ಸಿಬ್ಬಂದಿಗಳಿಗೆ ಲಸಿಕೆ ಪ್ರಮಾಣ ಪತ್ರ ಕಡ್ಡಾಯ

Social Share

ಬೆಂಗಳೂರು,ಜ.5-ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ವೈರಸ್ ಓಮಿಕ್ರಾನ್ ವೈರಾಣು ಸೋಂಕು ದಿನೇ ದಿನೇ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸಚಿವಾಲಯದ ಮುಖ್ಯಮಂತ್ರಿ ಕಚೇರಿ, ಸಚಿವರು ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾದ ಭೇಟಿಗೆ ಆಗಮಿಸುವ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ 2ನೆ ಡೋಸ್ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಸಾಮಾನ್ಯ ಭೇಟಿಗೆ ಪ್ರವೇಶವನ್ನು ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧ ಹಾಕಲಾಗಿದೆ. ಇನ್ನು ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕಾರಿ ಸಿಬ್ಬಂದಿಗಳು 2ನೇ ಕೋವಿಡ್ ಲಸಿಕೆಯನ್ನು ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಪ್ರಮಾಣ ಪತ್ರವನ್ನು ಹೊಂದಿದವರು ಮಾತ್ರ ಕಚೇರಿಗೆ ಆಗಮಿಸಬೇಕು. ಒಂದು ವೇಳೆ ಅಂತಹ ಯಾವುದಾದರೂ ಸಿಬ್ಬಂದಿ ಗೈರು ಹಾಜರಾದರೆ ವೇತನ ರಹಿತ ರಜೆ ಎಂದು ಪರಿಗಣಿಸುವುದಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಚಿವಾಲಯದ ಕಟ್ಟಡಗಳಿಗೆ ಆಗಮಿಸುವವರು ಪೂರ್ವಾನುಮತಿ ಪತ್ರ, ಸಭಾಸೂಚನ ಪತ್ರ ಹಾಗೂ 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಖಚಿತಪಡಿಸಿಕೊಂಡು ನಂತರವೇ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚನೆ ನೀಡಿದ್ದಾರೆ.
ಸಚಿವಾಲಯದಲ್ಲಿ ಅತ್ಯಗತ್ಯ ಸೇವೆ ಒದಗಿಸುತ್ತಿರುವ ಎಲ್ಲ ವರ್ಗದ ಅಕಾರಿ, ಸಿಬ್ಬಂದಿಗಳು ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ ವೃಂದದ ಎಲ್ಲಾ ಅಕಾರಿಗಳು ಕೂಡ ಕಚೇರಿಗೆ ಹಾಜರಿರಬೇಕು.
ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಕಾರಿ ಮತ್ತು ಸಿಬ್ಬಂದಿ ಗಳು ಶೇ.50ರಷ್ಟು ಸಿಬ್ಬಂದಿಗಳು ರೊಟೇಶನ್ ಆಧಾರದ ಮೇಲೆ ಕರ್ತವ್ಯಕ್ಕೆ ಬರಬೇಕು. ಹಾಜರಾತಿಯಿಂದ ವಿನಾಯ್ತಿ ನೀಡಲ್ಪಟ್ಟ ಇಲಾಖೆಯ ಕಾರ್ಯದರ್ಶಿಯವರು, ಮುಖ್ಯಸ್ಥರು ಇಚ್ಚಿಸಿದ್ದಲ್ಲಿ ಅವರು ಬಯಸುವಂತಹ ಅಕಾರಿ/ನೌಕರರು ಯಾವುದೇ ಕಾರಣ ನೀಡದೆ ಕಚೇರಿಗೆ ಹಾಜರಾಗಬೇಕು.
ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಿರುವ ಅಕಾರಿಗಳು/ನೌಕರರು ತಪ್ಪದೆ ಕರ್ತವ್ಯಕ್ಕೆ ಹಾಜರಾಗಬೇಕು. ದೃಷ್ಟಿಹೀನ ಇತರೆ ಅಂಗವೈಕಲ್ಯ ಹೊಂದಿರುವ ಸಿಬ್ಬಂದಿ ಮತ್ತು ಗರ್ಭಿಣಿ ಮಹಿಳೆ ಸಿಬ್ಬಂದಿಗಳು ಕಚೇರಿಗೆ ಹಾಜರಾತಿಗೆ ವಿನಾಯ್ತಿ ನೀಡಲಾಗಿದೆ.
ಸರ್ಕಾರ ಹೊರಡಿಸಿರುವ ಸುತ್ತೋಲೆಯೂ ಜ.18ರವರೆಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

Articles You Might Like

Share This Article