15 ರಿಂದ18 ವರ್ಷದವರಿಗೆ 28 ದಿನಗಳ ಬಳಿಕ 2ನೇ ಡೋಸ್

Social Share

ನವದೆಹಲಿ,ಫೆ.2- ಕೋವಿಡ್‍ನ ಮೊದಲ ಲಸಿಕೆ ಪಡೆದ 15ರಿಂದ 18ರ ವಯೋಮಾನದವರು 28 ದಿನಗಳ ಬಳಿಕ 2ನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈವರೆಗೂ 2ನೇ ಡೋಸ್‍ನ ಅವಯ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೋವಾಕ್ಸಿನ್ ಮೊದಲ ಡೋಸ್ ಪಡೆದ 15ರಿಂದ 18ರ ವಯೋಮಾನದವರು ಜ.31ರಿಂದ 2ನೇ ಡೋಸ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಜ.3ರಂದು 15ರಿಂದ 18 ವರ್ಷದವರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಅವರಿಗೆ ಜ.31ಕ್ಕೆ 28 ದಿನ ಪೂರ್ಣಗೊಳ್ಳಲಿದ್ದು, 2ನೇ ಡೋಸ್ ಹಾಕಿಸಿಕೊಳ್ಳಬಹುದು. ಈವರೆಗೂ 4.66 ಕೋಟಿ ಯುವ ಜನರಿಗೆ ಮೊದಲ ಡೋಸ್ ಹಾಕಿದ್ದು, ಶೇ.63ರಷ್ಟು ಒಂದೇ ತಿಂಗಳಲ್ಲಿ ಗುರಿ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವದಲ್ಲೇ ಭಾರತ ಲಸಿಕಾ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು, ಈವರೆಗೂ 166.8 ಕೋಟಿ ಡೋಸೆಜ್‍ಗಳನ್ನು ನೀಡಿದೆ. 2ನೇ ಡೋಸ್ ಪಡೆದ ಯುವಜನರು ಕೋವಿನ್ ಆಪ್‍ನಲ್ಲಿ ತಮ್ಮ ಮಾಹಿತಿಯನ್ನು ನಮೂದಿಸುವಂತೆ ಅವರು ಸೂಚನೆ ನೀಡಿದ್ದಾರೆ.

Articles You Might Like

Share This Article