ಬೆಂಗಳೂರು,ಜ.1- ಇಂದಿನಿಂದ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ನೋಂದಣಿ ಆರಂಭವಾಗಿದೆ. 2007ರಲ್ಲಿ ಅಥವಾ ಅದಕ್ಕಿಂತ ಮೊದಲು ಜನಿಸಿದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲು ನಿರ್ದರಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮೊಬೈಲ್ ಸಂಖ್ಯೆ ಇದ್ದರೆ ಅವರು ನಂಬರ್ ರಿಜಿಸ್ಟ್ರಾರ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪೋಷಕರು ಅಥವಾ ಶಾಲೆಯ ಮುಖ್ಯೋಪಾಧ್ಯಾಯರ ನಂಬರ್ ರಿಜಿಸ್ಟ್ರಾರ್ ಮಾಡಿಕೊಂಡು ಲಸಿಕೆ ಪಡೆಯಬಹುದು.
ಮಕ್ಕಳ ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತಿನ ಚೀಟಿಯನ್ನು ಲಗತ್ತಿಸಿ ನೋಂದಣಿ ಮಾಡಬಹುದಾಗಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ 0.05 ಮಿಲಿ ಡೋಸ್ ನೀಡಲಾಗುತ್ತದೆ. 15ರಿಂದ 18 ವಯೋಮಿತಿಯ ಮಕ್ಕಳು ಓದುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಂದೆ ಲಸಿಕಾ ಶಿಬಿರಗಳನ್ನು ಆಯೋಜನೆ ಮಾಡಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ತಮಗೆ ಬೇಕಾದ ಡೋಸ್‍ಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಕಾರಿಗಳಿಗೆ ನೀಡಿದರೆ ಆಯಾ ಶಿಕ್ಷಣ ಸಂಸ್ಥೆಗಳ ಬಳಿಯೇ ಲಸಿಕೆ ಹಾಕುವ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಲಯ ಜಂಟಿ ಆಯುಕ್ತರಿಗೆ ಮಾಹಿತಿ ಸಲ್ಲಿಸಬೇಕು. ಇತರೆ ಕಾಯಿಲೆ ಇರುವ ಮಕ್ಕಳಿಗೆ ಲಸಿಕೆ ನೀಡಲು ವೈದ್ಯರ ಪತ್ರ ಹಾಗೂ ಪೋಷಕರ ಸಹಮತ ಪತ್ರ ಕಡ್ಡಾಯವಾಗಿರುತ್ತದೆ.
15 ದಿನಗಳ ಒಳಗಾಗಿ ಟಿಡಿ ಅಥವಾ ಇನ್ನಿತರೆ ಲಸಿಕೆ ಪಡೆದಿದ್ದರೆ ಅಂತಹ ಮಕ್ಕಳಿಗೆ 15 ದಿನಗಳ ನಂತರ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಕನಿಷ್ಠ ಮೂರು ಕೌಂಟರ್‍ಗಳ ವ್ಯವಸ್ಥೆ ಮಾಡಲಾಗುವುದು. ಆಫ್‍ಲೈನ್ ವಿದ್ಯಾರ್ಥಿಗಳಿಗೆ ಆಯಾ ಶಾಲಾ-ಕಾಲೇಜುಗಳಿನವರೇ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು.
ಖಾಸಗಿ ಆಸ್ಪತ್ರೆಯಲ್ಲೂ ಪೊಷಕರು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಶಾಲೆ, ಕಾಲೇಜಿನಿಂದ ಹೊರಗುಳಿದಿರುವ ಮಕ್ಕಳಿಗೆ ನಗರಾಭಿವೃದ್ಧಿ ಇಲಾಖೆ, ಪಂಚಾಯತ್‍ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಲಸಿಕೆ ನೀಡಲಾಗುವುದು.
