ಬೆಂಗಳೂರು, ಜ.13- ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆ-ಪ್ರಾರ್ಥನೆಗಳು ನೆರವೇರಿದವು.
ವೈಯಾಲಿಕಾವಲ್ನ ವೆಂಕಟೇಶ್ವರ ದೇವಾಲಯ, ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಇಸ್ಕಾನ್, ದೇವಗಿರಿಯ ದೇವಸ್ಥಾನ, ರಾಜಾಜಿನಗರದ ಕೈಲಾಸ ವೈಕುಂಠ ದೇಗುಲ ಸೇರಿದಂತೆ ನಗರದ ಬಹುತೇಕ ವಿಷ್ಣು ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ-ಹೋಮ-ಹವನಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಾಧಾರಣವಾಗಿ ವೈಕುಂಠ ಏಕಾದಶಿಯಂದು ನಸುಕಿನ ಜಾವವೇ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಆದರೆ, ಈ ಬಾರಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ಕಫ್ರ್ಯೂ ಇರುವುದರಿಂದ ನಗರದ ವಿಷ್ಣು ದೇವಾಲಯಗಳಲ್ಲಿ ಮುಂಜಾನೆ 5ರ ನಂತರವೇ ಭಕ್ತಾದಿಗಳಿಗೆ ದರ್ಶನಾವಕಾಶ ಮಾಡಿಕೊಡಲಾಯಿತು.
ಈ ಹಿಂದಿನ ವರ್ಷಗಳಲ್ಲಿ ದೇವಾಲಯಗಳ ಮುಂದೆ ಮೈಲುದ್ದದ ಸಾಲುಗಳು ಕಂಡುಬರುತ್ತಿದ್ದವು. ಆದರೆ, ಈ ಬಾರಿ ಎಂದಿನ ಜನದಟ್ಟಣೆ ಅಷ್ಟಾಗಿ ಕಾಣಲಿಲ್ಲ. ಕೋವಿಡ್ ಮಾರ್ಗಸೂಚಿ ಮೇರೆಗೆ ಪ್ರತಿಯೊಂದು ದೇವಾಲಯದಲ್ಲಿ 50:50 ಜನರ ತಂಡಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಭಕ್ತಾದಿಗಳು ಬೆಳಗ್ಗೆಯೇ ಮಿಂದು ಶುಭ್ರ ವಸ್ತ್ರ ಧರಿಸಿ ದೇವಾಲಯಗಳಿಗೆ ತೆರಳಿ ವೈಕುಂಠ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿ ಪೂಜೆ-ಪ್ರಾರ್ಥನೆ ನೆರವೇರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಅವರು ಹಲವೆಡೆ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದರು.
ವೈಕುಂಠ ಏಕಾದಶಿಯಂದು ವೈಕುಂಠದ್ವಾರ ತೆರೆಯುತ್ತದೆ. ಅಂದು ವಿಷ್ಣು ದೇವರ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
