ಬೆಂಗಳೂರು,ಡಿ.12- ಮಾಗಿಕಾಲದ ಚುಮು ಚುಮು ಚಳಿಯ ನಡುವೆ 20 ನೇ ವರ್ಷದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಶಂಕರಮಠ ವೃತ್ತದ ಸಮೀಪವಿರುವ ವಿವೇಕಾನಂದ ಆಟದ ಮೈದಾನದಲ್ಲಿ ಇದೇ 21 ರಿಂದ 20ನೇ ವರ್ಷದ ಅಖಿಲ ಭಾರತ ಹಿರಿಯರ ಆಹ್ವಾನಿತ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ.
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಡಾಕ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಉಪಮೇಯರ್ ಆಗಿರುವ ಎಸ್.ಹರೀಶ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಸ್ಮರಣಾರ್ಥ ಕಳೆದ 20 ವರ್ಷಗಳಿಂದ ನಿರಂತರವಾಗಿ ವಾಜಪೇಯಿ ಕಪ್ ವಾಲಿಬಾಲ್‍ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದಾರೆ.
ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದಡಿಯಲ್ಲಿ ನಡೆಸಿಕೊಂಡು ಬರುತ್ತಿರುವ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಗಳು ಕಳೆದ ಕೆಲವು ವರ್ಷಗಳಿಂದ ರಾಷ್ಟ್ರ ಮಟ್ಟದ ಕ್ರೀಡೆಯಾಗಿ ಪರಿವರ್ತನೆಗೊಂಡಿದೆ.
ಡಿ.21 ರಿಂದ 25ರವರೆಗೆ ನಡೆಯಲಿರುವ ಅಖಿಲ ಭಾರತ ಹಿರಿಯರ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಪಂದ್ಯಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಹಲವಾರು ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸುತ್ತಿವೆ.
ರೆಪೋ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಹಾನಿ: ಎಫ್‍ಕೆಸಿಸಿಐ
ಯಾವ ಯಾವ ತಂಡಗಳು ಭಾಗವಹಿಸುತ್ತಿವೆ: 20ನೇ ವರ್ಷದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಇಂಡಿಯನ್ ನೇವಿ(ದೆಹಲಿ), ಬಿಪಿಸಿಎಲ್, ಜಿಎಸ್ಟಿ ಮತ್ತು ಎಕ್ಸೈಸ್(ಚೆನ್ನೈ), ಕೇರಳ ಪೊಲೀಸ್(ತಿರುವಂತನಪುರಂ), ಸದರನ್ ಸೆಂಟ್ರಲ್ ರೈಲ್ವೆ(ಸಿಕಂದರಾಬಾದ್) ಹಾಗೂ ಕರ್ನಾಟಕ ವಾಲಿಬಾಲ್‍ನ ಪುರುಷ ತಂಡಗಳು ಭಾಗವಹಿಸುತ್ತಿವೆ.
ಅದೇ ರೀತಿ ದಕ್ಷಿಣ ಸೆಂಟ್ರಲ್ ರೈಲ್ವೇ (ಸಿಕಂದರಾಬಾದ್), ಐಸಿಎಫ್(ಚೆನ್ನೈ), ಕೇರಳ ಪೊಲೀಸ್(ತಿರುವಂತನಪುರಂ) ಹಾಗೂ ಕರ್ನಾಟಕದ ಮಹಿಳಾ ತಂಡಗಳು ಸೆಣಸಾಡಲಿವೆ.
20 ಸಾಧಕಿಯರಿಂದ ಉದ್ಘಾಟನೆ : ಡಿ.21ರಂದು ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ 20ನೇ ವರ್ಷದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಲಾಗುವುದು ಎಂದು ಮಾಜಿ ಉಪಮೇಯರ್ ಎಸ್.ಹರೀಶ್ ತಿಳಿಸಿದ್ದಾರೆ.
ವಾಲಿಬಾಲ್, ಥ್ರೋಬಾಲ್, ಅಥ್ಲೇಟಿಕ್ಸ್, ಈಜು ಮತ್ತಿತರ ಕ್ರೀಡಾ ಕ್ರೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿರುವ 20 ಸಾಧಕಿಯರಿಂದ ಈ ಭಾರಿಯ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ಮಾಡಿಸುತ್ತಿರುವುದು ವಿಶೇಷವಾಗಿದೆ. ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ವಿವಿಧ ಸಾಂಸ್ಕøತಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಕೈ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು
ಒಂದೂವರೆ ಲಕ್ಷ ಬಹುಮಾನ: ಐದು ದಿನಗಳ ಕಾಲ ನಡೆಯಲಿರುವ ವಾಜಪೇಯಿ ಕಪ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವ ತಂಡಗಳಿಗೆ ಒಂದೂವರೆ ಲಕ್ಷ ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ.
ಮೊದಲ ಸ್ಥಾನ ಪಡೆಯುವ ಪುರುಷ ಹಾಗೂ ಮಹಿಳಾ ತಂಡಕ್ಕೆ ತಲಾ ಒಂದು ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿದೆ. ದ್ವಿತಿಯ ಸ್ಥಾನ ಪಡೆಯುವ ಉಭಯ ತಂಡಗಳಿಗೂ ತಲಾ 50 ಸಾವಿರ ರೂ.ಗಳ ಬಹುಮಾನ ನೀಡಲಾಗುತ್ತಿದೆ.
ರಸದೌತಣ: ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಗಳು ಈ ಭಾಗದ ಕ್ರೀಡಾಭೀಮಾನಿಗಳಿಗೆ ರಸದೌತಣ ನೀಡುತ್ತ ಬಂದಿದೆ. ಡಿಸಂಬರ್ ತಿಂಗಳ ಚುಮು ಚುಮು ಚಳಿಯಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾವಳಿ ವೀಕ್ಷಿಸಲು ಮಹಾಲಕ್ಷ್ಮೀ ಬಡಾವಣೆ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಮತ್ತಿತರ ಪ್ರದೇಶಗಳಿಂದ ನೂರಾರು ಕ್ರೀಡಾಭಿಮಾನಿಗಳು ಆಗಮಿಸಿ ವಾಲಿಬಾಲ್ ಪಂದ್ಯಾವಳಿಗಳನ್ನು ವೀಕ್ಷಿಸುವುದು ವಾಡಿಕೆಯಾಗಿದೆ.
ಡಿ 15ರಿಂದ ಪಂಚರತ್ನ ಯಾತ್ರೆ ಮತ್ತೆ ಪ್ರಾರಂಭ
ಈ ಬಾರಿಯೂ ವಾಜಪೇಯಿ ಕಪ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿರುವ ಹೆಸರಾಂತ ತಂಡಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ರಸದೌತಣ ನೀಡಲಿ ದ್ದಾರೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vajapayee Cup, Volleyball, Tournament, Bengaluru,