ಬೆಂಗಳೂರು,ಫೆ.13- ಕೋವಿಡ್ ಸಾಂಕ್ರಾಮಿಕದ ಆತಂಕದ ನಡುವೆಯೇ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಆಚರಿಸುವ ಪ್ರೇಮಿಗಳ ದಿನಕ್ಕೆ ಉದ್ಯಾನ ನಗರಿ ಬೆಂಗಳೂರು ಸಜ್ಜಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗುಲಾಬಿ ಹೂಗಳ ಬೇಡಿಕೆ, ಮಾರಾಟ, ಪೂರೈಕೆ ಮತ್ತು ಬೆಲೆಯೂ ಏರಿಕೆಯಾಗಿದೆ.
ಇದು ಕೇವಲ ವ್ಯಾಲೆಂಟೈನ್ಸ್ ಡೇ ಕಾರಣದಿಂದಲ್ಲ, ಸಾಂಕ್ರಾಮಿಕ ರೋಗದ ನಂತರ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಿಂದಾಗಿ ಗುಲಾಬಿ ಹೂವುಗಳ ಬೇಡಿಕೆಯ ಹೆಚ್ಚಾಗಿದೆ. ಸರ್ಕಾರ ಸಭೆ ಮತ್ತು ಸಮಾರಂಭಗಳಿಗೆ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಹೂವುಗಳಿಗೆ, ವಿಶೇಷವಾಗಿ ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಹೂವಿನ ವ್ಯಾಪಾರಿಗಳಿಗೆ ಖುಷಿ ತಂದಿದೆ.
ಇಂಟರ್‍ನ್ಯಾಶನಲ್ ಫ್ಲವರ್ಸ್ ಹರಾಜು ಬೆಂಗಳೂರು ಲಿಮಿಟೆಡ್‍ನ ಸದಸ್ಯರ ಪ್ರಕಾರ, ಕಳೆದ ವರ್ಷ ಪ್ರೇಮಿಗಳ ವಾರದಲ್ಲಿ (ಫೆಬ್ರವರಿ 8-13ರಿಂದ) 4.25 ಲಕ್ಷ ಗುಲಾಬಿ ಕಾಂಡಗಳು ಮಾರಾಟವಾಗಿದ್ದು, ಈ ವರ್ಷ ಈಗಾಗಲೇ 5.50 ಲಕ್ಷ ಕಾಂಡಗಳು ಮಾರಾಟವಾಗಿದೆ.
ಅಲ್ಲದೆ, ಕಾಂಡದ ಬೆಲೆಯೂ ಏರಿಕೆಯಾಗಿದೆ. ಕಳೆದ ವರ್ಷ, ಒಂದು ಗುಲಾಬಿ ಕಾಂಡದ ಬೆಲೆ 32 ರೂ.ಗಳಷ್ಟಿತ್ತು ಮತ್ತು ಈ ವರ್ಷ ಪ್ರಸ್ತುತ ಒಂದು ಕಾಂಡದ ಬೆಲೆ 25 ರಿಂದ 30 ರೂ. ಇತ್ತು. ಈಗ 40 ರೂ.ಗೆ ಏರಿದೆ. ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದಾಗಿ, ಆಚರಣೆಗಳು ಸಂತೋಷಕೂಟಗಳು ಮತ್ತು ಹಬ್ಬಗಳು ಕಡಿಮೆಯಾಗಿತ್ತು. ಈ ವರ್ಷ ಅದು ಕಂಡುಬರುತ್ತಿಲ್ಲ ಮತ್ತು ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
