ಬೆಲೆ ಏರಿಕೆ ನಡುವೆಯೂ ಕುಗ್ಗದ ಹಬ್ಬದ ಉತ್ಸಾಹ : ಮಾರುಕಟ್ಟೆಯಲ್ಲಿ ಜನಜಾತ್ರೆ

Social Share

ಬೆಂಗಳೂರು,ಆ.4- ಹೂವು, ಹಣ್ಣು, ತರಕಾರಿ ಬೆಲೆ ಏರಿಕೆಯಾಗಿದ್ದರೂ ಸಿಲಿಕಾನ್ ಸಿಟಿ ಜನ ಮಾತ್ರ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಕೊರೊನಾ ಕಾಟದಿಂದ ಕಳೆದ ಎರಡು ವರ್ಷಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದೆ ಮನೆಯಲ್ಲೇ ಸಾಮಾನ್ಯವಾಗಿ ಹಬ್ಬ ಆಚರಿಸುವಂತಾಗಿತ್ತು.

ಇದೀಗ ಕೊರೊನಾ ಕಾಟ ಇಲ್ಲದಿರುವುದರಿಂದ ಈ ಬಾರಿ ಅದ್ದೂರಿಯಾಗಿ ಹಬ್ಬ ಆಚರಿಸಲು ತೀರ್ಮಾನಿಸಿರುವುದರಿಂದ ಹಬ್ಬದ ಹಿಂದಿನ ದಿನವೇ ಮಾರುಕಟ್ಟೆಗಳಿಗೆ ಮುಗಿ ಬಿದ್ದು ಬೆಲೆ ಹೆಚ್ಚಳವಾದರೂ ಹೂವು-ಹಣ್ಣು ಮತ್ತಿತರ ಹಬ್ಬದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಮಾರುಕಟ್ಟೆ ಮುಖ್ಯರಸ್ತೆಯ ಎರಡು ಬದಿಗಳಲ್ಲೂ ವ್ಯಾಪಾರ ಮಾಡುತ್ತಿದ್ದರಿಂದ ಅಲ್ಲಿ ಜನಜಾತ್ರೆ ಕಂಡು ಬಂತು. ರಸ್ತೆಗಳಲ್ಲೇ ಹೂವು-ಹಣ್ಣಿನ ವ್ಯಾಪಾರ ನಡೆಯುತ್ತಿದ್ದ ಕಾರಣ ಮಾರುಕಟ್ಟೆ ಮುಖ್ಯರಸ್ತೆಯನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ತುಂತುರು ಮಳೆ ಬೀಳುತ್ತಿದ್ದರೂ ಜನ ಮಾತ್ರ ಹಬ್ಬದ ಸಾಮಾಗ್ರಿಗಳನ್ನು ಖರೀದಿಸುವುದರಿಂದ ಹಿಂದೆ ಸರಿಯದಿರುವುದನ್ನು ಗಮನಿಸಿದರೆ ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಅದ್ದೂರಿ ವರಮಹಾಲಕ್ಷ್ಮೀ ಹಬ್ಬ ಆಚರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ದರ ಏರಿಕೆ: ವರಮಹಾಲಕ್ಷ್ಮಿ ಹಬ್ಬದ ಹಿನ್ನಲ್ಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆಗಳು ಗಗನ ಮುಖಿಯಾಗಿವೆ.
ಹೂವಿನ ಬೆಲೆ: ಮಲ್ಲಿಗೆ ಒಂದು ಮಾರು 200, ಕನಕಾಂಬರ ಒಂದು ಮಾರಿಗೆ 300, ಸೇವಂತಿಗೆ ಒಂದು ಕೆ.ಜಿಗೆ 400 ರೂ. ಗುಲಾಬಿ 410, ಸುಗಂಧರಾಜ 110 ಹಾಗೂ ಚೆಂಡು ಹೂವು ಕೆಜಿಗೆ 80 ರೂ.ಗಳಾಗಿದೆ.
ಹಣ್ಣುಗಳ ಬೆಲೆ: ಸೇಬು ಕೆಜಿಗೆ 200, ದಾಳಿಂಬೆ 150, ಮೂಸಂಬಿ 100, ಆರೆಂಜ್ 220, ಸಪೋಟ 200, ಸೀಬೆಹಣ್ಣು 100, ಏಲಕ್ಕಿ ಬಾಳೆಹಣ್ಣು 80 ಹಾಗೂ ದ್ರಾಕ್ಷಿ ಕೆಜಿಗೆ 220 ರೂ.ಗಳಾಗಿದೆ.
ಹಬ್ಬದ ಸಾಮಾಗ್ರಿಗಳು: ಮಾವಿನ ಎಲೆ ಕಟ್ಟು 20 ರೂ., ಬಾಳೆ ಕಂಬ 50, ಬೇವಿನಸೊಪ್ಪು 20 ತುಳಸಿ ತೋರಣ ಮಾರಿಗೆ 50 ರೂ.ಗಳಾಗಿವೆ.
ಕುಗ್ಗದ ಉತ್ಸಾಹ: ಹೂವು, ಹಣ್ಣು ಹಾಗೂ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದರೂ ಜನರ ಉತ್ಸಾಹ ಮಾತ್ರ ಕುಗ್ಗಿಲ್ಲ. ಮಾರುಕಟ್ಟೆಗಳಿಗೆ ಮುಗಿಬಿದ್ದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

Articles You Might Like

Share This Article