ಉದ್ಧವ್ ಠಾಕ್ರೆ ಗಡಿ ಕ್ಯಾತೆಗೆ ಕನ್ನಡಿಗರ ಆಕ್ರೋಶ, ರಕ್ತ ಕ್ರಾಂತಿಯ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್

ಬೆಂಗಳೂರು, ಜ.18- ಗಡಿ ವಿಷಯದಲ್ಲಿ ತಗಾದೆ ತೆಗೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ರಾಜ್ಯಾದ್ಯಂತ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಮರಾಠಿ ಬಾಹುಳ್ಯದ ಕರ್ನಾಟಕ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕೆಂಬ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ರಾಜಧಾನಿ ಬೆಂಗಳೂರು, ಬೆಳಗಾವಿಯಲ್ಲಿಂದು ಪ್ರತಿಭಟನೆ ನಡೆಸಿವೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಾಗೂ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ. ವಿವಿಧೆಡೆ ಮಹಾರಾಷ್ಟ್ರ ಮುಖ್ಯಮಂತ್ರಿಯ ಪ್ರತಿಕೃತಿಗಳನ್ನು ದಹಿಸಿ ಅವರ ಹೇಳಿಕೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ನಾಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡದ ಒಂದಿಂಚು ಭೂಮಿಯನ್ನೂ ಬಿಡುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಅಧಿಕಾರದ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುವ ಉದ್ಧವ್ ಠಾಕ್ರೆ ಹಾಗೂ ಅವರ ಪಕ್ಷದವರ ಕ್ರಮ ಖಂಡನೀಯ. ಇದನ್ನು ಯಾವುದೇ ಕಾರಣಕ್ಕೂ ಕನ್ನಡಿಗರು ಸಹಿಸುವುದಿಲ್ಲ. ನಮ್ಮ ರಾಜ್ಯ ಸರ್ಕಾರ ಆ ಹೇಳಿಕೆ ವಿರುದ್ಧ ಸರ್ವಾನುಮತದ ಖಂಡನೆ ವ್ಯಕ್ತಪಡಿಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ಮುಖಂಡರಾದ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್, ಮಂಜುನಾಥ್ ದೇವು, ಶಿವರಾಮೇಗೌಡ, ಗಿರೀಶ್‍ಗೌಡ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಅವರ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮರಾಠಿ ಭಾಷಿಗರ ಬಾಹುಳ್ಯ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದಾದರೆ ಮುಂಬೈ, ಕೊಲ್ಲಾಪುರ ಸಂಪೂರ್ಣ ಕರ್ನಾಟಕಕ್ಕೆ ಸೇರಬೇಕಾಗುತ್ತದೆ. ಉದ್ಧವ್ ಠಾಕ್ರೆ ಅಪ್ಪ ಬಾಳಠಾಕ್ರೆ ಕಾಲದಿಂದಲೂ ಇಂತಹ ಕಿಡಿಗೇಡಿ ಹೇಳಿಕೆಗಳನ್ನು ನೀಡಿ ರಾಜಕಾರಣ ಮಾಡುತ್ತ ಬಂದಿದ್ದಾರೆ. ಸಮಗ್ರ ಕನ್ನಡಿಗರೇ ಒಂದಾಗಿ ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಗಡಿ ವಿಷಯದಲ್ಲಿ ಪದೇ ಪದೇ ಇಂತಹ ಉದ್ಧಟತನದ ಹೇಳಿಕೆ ನೀಡುವವರ ವಿರುದ್ಧ ನಾವು ಬೃಹತ್ ಹೋರಾಟ ಮಾಡಬೇಕು. ಬೆಳಗಾವಿಯಿಂದಲೇ ಆ ಹೋರಾಟವನ್ನು ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಕನ್ನಡದ ಬಗ್ಗೆ ಬದ್ಧತೆ ಇಲ್ಲ. ಮರಾಠಿಗರನ್ನು ಓಲೈಸಲು ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಈಗ ಅವರು ಮೂರು ಜಿಲ್ಲೆಗಳು ನಮಗೆ ಸೇರಬೇಕು ಎಂದು ಹೇಳುತ್ತಾರೆ. ನಾಳೆ ಕರ್ನಾಟಕ ಪೂರ್ತಿ ನಮ್ಮದೆಂದು ಹೇಳುತ್ತಾರೆ.

ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆಯೇ ಹೊರತು ಗಡಿ ಪ್ರದೇಶದಲ್ಲಿರುವ ಕನ್ನಡಿಗರನ್ನು ಉಳಿಸಿಕೊಳ್ಳುವ ಕೆಲಸವಾಗುತ್ತಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಮುಂದಾದರೆ ರಾಜ್ಯದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಚ್ಚರ ಎಂದು ವಾಟಾಳ್ ಗುಡುಗಿದರು. ಬೆಳಗಾವಿ ರಾಜಕಾರಣಿಗಳು ಎಂಇಎಸ್ ಶಿವಸೇನೆ ಪರವಾಗಿದ್ದಾರೆ ಎಂದು ವಾಟಾಳ್ ಆರೋಪಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ. ಆ ಬಗ್ಗೆ ಒಕ್ಕೂಟದೊಂದಿಗೆ ಸಮಗ್ರ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ರಾಜಕೀಯ ಕಾರಣಕ್ಕಾಗಿ ಉದ್ಧವ್ ಠಾಕ್ರೆ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯದ ಒಂದಂಗುಲ ನೆಲವನ್ನು ಕೂಡ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆ ಮೇಲೆ ಉದ್ಧವ್ ಠಾಕ್ರೆಗೆ ನಂಬಿಕೆ ಇಲ್ಲ. ಕನ್ನಡಿಗರು ಶಾಂತವಾಗಿರುವುದು ದೌರ್ಬಲ್ಯವೆಂದು ತಿಳಿದಿದ್ದಾರೆ. ಆದರೆ, ನಮ್ಮನ್ನು ಕೆಣಕಿದರೆ ನಮ್ಮ ತಾಕತ್ತೇನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ಬೆಳಗಾವಿ, ಖಾನಾಪುರ, ಸೊಲ್ಲಾಪುರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಚುನಾವಣಾ ಸಂದರ್ಭದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡವನ್ನು ಬಲಿ ಕೊಡಬಾರದು ಎಂದು ಆವರು ಹೇಳಿದರು. ಉದ್ಧವ್ ಠಾಕ್ರೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಉದ್ಧವ್ ಠಾಕ್ರೆ ಅವರ ಕುಚೇಷ್ಟೆಯ ಹೇಳಿಕೆ ಇದಾಗಿದೆ. ಶಿವಸೇನೆಯವರಿಗೆ ಮೂರು ತಿಂಗಳಿಗೊಮ್ಮೆ ಗಡಿತಂಟೆ ಕೆದಕದಿದ್ದರೆ ತಿಂದಿದ್ದು ಅರಗುವುದಿಲ್ಲ. ಹೀಗೆ ಮಾತನಾಡಿ ಉದ್ಧವ್ ಠಾಕ್ರೆ ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.

ಕನ್ನಡಿಗರು ಆಶ್ರಯದಾತರೇ ಹೊರತು ಆಕ್ರಮಣಕಾರಿಗಳಲ್ಲ ಎಂಬುದನ್ನು ಠಾಕ್ರೆ ಅರಿತುಕೊಳ್ಳಬೇಕು. ಶಿವಸೇನೆಯವರು ಕನ್ನಡಿಗರಿಗೆ ಚಿರಋಣಿಗಳಾಗಿರಬೇಕು. ಇತಿಹಾಸದಿಂದ ಇದನ್ನು ತಿಳಿದುಕೊಳ್ಳಬೇಕು. ಛತ್ರಪತಿ ಶಿವಾಜಿ ಅವರ ಎರಡನೆ ಮಗನಿಗೆ ಆಶ್ರಯ ನೀಡಿ ಔರಂಗಜೇಬನ ಸೈನ್ಯದಿಂದ ಕಾಪಾಡಿದ್ದು ವೀರರಾಣಿ ಕೆಳದಿ ಚೆನ್ನಮ್ಮ ಎಂದರು.

ಗಡಿ ವಿವಾದ ಪರಿಹಾರಕ್ಕೆ ಮಹಾರಾಷ್ಟ್ರದ ಒತ್ತಡದ ಮೇರೆಗೆ ಮಹಾಜನ್ ಆಯೋಗ ರಚನೆಯಾಗಿದ್ದು, ಆದರೆ, ಈಗ ಆ ವರದಿಯನ್ನು ಒಪ್ಪದೆ ಮಹಾರಾಷ್ಟ್ರ ತಗಾದೆ ತೆಗೆಯುತ್ತಿದೆ. ಸುಪ್ರೀಂಕೋರ್ಟ್‍ಗೂ ಹೋಗಿದೆ. ಮಹಾಜನ್ ವರದಿ ಅಂತಿಮ ಎಂಬುದು ನಮ್ಮ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು, ಕೀಳು ರಾಜಕೀಯಕ್ಕಾಗಿ ಭಾಷಾ ಸಮುದಾಯದ ನಡುವೆ ಬೆಂಕಿ ಹಚ್ಚುವ ದುಷ್ಟತನವಾಗಿದೆ ಎಂದು ಅವರು ಖಂಡಿಸಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ. ಇತ್ತ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆ ಅವರಿಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾದನೀಯ. ಶಿವಸೇನೆ, ಎಂಇಎಸ್ ಕುತಂತ್ರ, ಕಿತಾಪತಿಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕರವೇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮಾತನಾಡಿ, ಉದ್ಧವ್ ಠಾಕ್ರೆ ಅವರ ಹುಚ್ಚು ಹೇಳಿಕೆಯನ್ನು ಖಂಡಿಸಿರುವುದಲ್ಲದೆ ಇದೇ ರೀತಿಯ ಹೇಳಿಕೆ ಕೊಟ್ಟರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನಿಮ್ಮ ಹೇಳಿಕೆ ಕೇಳಿಕೊಂಡು ಕನ್ನಡಿಗರು ಕೈಕಟ್ಟಿ ಕೂರುವುದಿಲ್ಲ. ನಿಮ್ಮ ರಾಜಕೀಯ ಕಾರಣಕ್ಕಾಗಿ ಕನ್ನಡದ ಹಿತಾಸಕ್ತಿ ಬಲಿ ಕೊಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ, ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾಡಿದ್ದಾರೆ. ಅವರಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮಥ್ರ್ಯ ನಮಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಕನ್ನಡಿಗರು ಅದನ್ನು ಒಪ್ಪಿ ಬದುಕುತ್ತಿದ್ದಾರೆ. ಆದರೆ, ಪದೇ ಪದೇ ಕೆಣಕುವ ಕೆಲಸವನ್ನು ಮಹಾರಾಷ್ಟ್ರದವರು ಮಾಡುತ್ತಿದ್ದಾರೆ ಎಂದು ಹೇಳಿರುವ ಅವರು, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.