ರಾಮನಗರ,ಜ.5-ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲವೆಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಮನಗರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುವ ಮೇಕೆದಾಟು ಯೋಜನೆಗೆ ನಮ್ಮ ಬೆಂಬಲವಿಲ್ಲ.
ಮೇಕೆದಾಟು ಯೋಜನೆ ಜಾರಿಯಾಗಬೇಕೆಂದು ಕಳೆದ ಹಲವು ವರ್ಷಗಳಿಂದಲೂ ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಕಾರದಲ್ಲಿದ್ದಾಗ ಅವರೇಕೆ ಮೇಕೆದಾಟು ಯೋಜನೆಯನ್ನು ಮಾಡಲಿಲ್ಲ.ಅವರನ್ನು ತಡೆದಿದ್ದವರು ಯಾರು? ಈಗ ರಾಜಕೀಯ ಮಾಡಬೇಕು ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾಡಿಗೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆಗೆ ಬೇರೆ ರೀತಿ ಹೋರಾಟ ಮಾಡುತ್ತೇವೆ ಎಂದರು.
ಸಿಎಂ ಇರುವ ವೇದಿಕೆಯಲ್ಲಿ ಸಚಿವರ ಭಾಷಣಕ್ಕೆ ಸಂಸದರು ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ವೇದಿಕೆಯಲ್ಲಿ ಮಾತನಾಡುವಾಗ ಆವೇಷದಲ್ಲಿ ಮಾತುಗಳನ್ನು ಆಡಿರಬಹುದು. ಅದಕ್ಕೆ ವೇದಿಕೆಯಲ್ಲೇ ಉತ್ತರ ನೀಡಬೇಕು. ಅದನ್ನು ವೀರಾವೇಷದಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಇಂತಹ ಮುಜುಗರದ ಘಟನೆ ನಡೆಯಬಾರದಿತ್ತು ಎಂದು ಹೇಳಿದರು.
